ನೂಗಲಬಂಡೆ; ಅಕ್ರಮ ಗುಡಿಸಲು ತೆರವು
ಮುಳಬಾಗಲು: ಹೊರವಲಯದ ನೂಗಲಬಂಡೆ ಪ್ರದೇಶದಲ್ಲಿ ಅಕ್ರಮವಾಗಿ ಗುಡಿಸಲು ಹಾಕಲು ಮುಂದಾದಾಗ ಸೋಮವಾರ ಪೊಲೀಸರ ಸಹಕಾರದೊಂದಿಗೆ ಕಂದಾಯ ಇಲಾಖೆ ಸಿಬ್ಬಂದಿ ತಡೆದು ಬೆಂಕಿ ಹಾಕಿದರು.
ಸುಮಾರು ಒಂದು ನೂರಕ್ಕೂ ಹೆಚ್ಚಿನ ಮಂದಿ ಗುಡಿಸಲು ಹಾಕಿಕೊಳ್ಳಲು ಮುಂದಾದಾಗ ಕಳೆದ ವಾರ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಗುಡಿಸಲು ವಾಸಿಗಳ ಮನವೊಲಿಸಿ ಗುಡಿಸಲು ಹಾಕುವುದನ್ನು ತಡೆದು, ನಿವೇಶನ ಮಂಜೂರು ಮಾಡಿಸಿಕೊಂಡ ನಂತರ ಗುಡಿಸಲು ಹಾಕಿಕೊಳ್ಳಲು ಸೂಚಿಸಿ ಸ್ಥಳವನ್ನು ತೆರವುಗೊಳಿಸಿದ್ದರು. ಆದರೆ ಸೋಮವಾರ ದಿಢೀರನೇ ಮತ್ತೆ ಗುಡಿಸಲು ನಿರ್ಮಿಸಲು ಮುಂದಾಗಿದ್ದರು. ಅದನ್ನು ತಡೆದು ಗುಡಿಸಲಿಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಸುಡಲಾಯಿತು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಪಿಎಸ್ಐ ಶಂಕರಪ್ಪ ಮತ್ತು ಸಿಬ್ಬಂದಿ ಹಾಜರಿದ್ದರು.