ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಹಲವು ಯೋಜನೆ

Rashmi Kasaragodu
Updated On : 4 Sept 2013, 1:28 am

ಕನ್ನಡಪ್ರಭ ವಾರ್ತೆ, ಕೋಲಾರ, ಸೆ.3
ರಾಜ್ಯದಲ್ಲಿ ಸಫಾಯಿ ಕರ್ಮಚಾರಿ ಅವಲಂಬಿತ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಸ್ವಯಂ ಉದ್ಯೋಗಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜಾರಿಗೆ ತಂದು ಸಫಾಯಿ ಕರ್ಮಚಾರಿಗಳು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದು ಮಲ ಹೊರುವ ಪದ್ಧತಿಯಿಂದ ಹೊರ ಬಂದು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರಲ್ಲಿ ಒಬ್ಬರಾದ ಜಗದೀಶ ಹಿರೇಮನಿ ತಿಳಿಸಿದರು.
ಅವರು ನಗರಸಭೆಯಲ್ಲಿ ಮಂಗಳವಾರ ಸಫಾಯಿ ಕರ್ಮಚಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಫಾಯಿ ಕರ್ಮಚಾರಿ ಅವಲಂಬಿತರ ಕುಟುಂಬಗಳಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಮಧ್ಯವರ್ತಿಗಳನ್ನು ದೂರವಿಟ್ಟು ತಾವೇ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಯೋಜನೆಗಳ ಲಾಭ ಪಡೆಯುವಂತೆ ತಿಳಿಸಿದರು. ಜಿಲ್ಲೆಯಲ್ಲಿ 2001 ರಿಂದ 2013ರವರೆಗೆ 4131 ಮಂದಿಗೆ 22.52 ಕೋಟಿ ರು. ಸಾಲವನ್ನು ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ನೀಡಿದ್ದು ಈ ಸಾಲವನ್ನು ಸರ್ಕಾರ ಮನ್ನಾ ಮಾಡಿರುವುದರಿಂದ ಸಫಾಯಿ ಕರ್ಮಚಾರಿಗಳಿಗೆ ಅನುಕೂಲವಾಗಿದೆ. ಜೊತೆಗೆ ಬ್ಯಾಂಕುಗಳಿಂದಲೂ 1 ಲಕ್ಷದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ ಎಂದರು. ಸಫಾಯಿ ಕರ್ಮಚಾರಿಗಳಿಗೆ ದೊರೆತಿರುವ ಸೌಲಭ್ಯದಲ್ಲಿ ಶೇ.50 ರಷ್ಟು ಮಾತ್ರ ಅರ್ಹರಾಗಿದ್ದು, ಉಳಿದ ಶೇ.50 ರಷ್ಟು ಮಂದಿ ಸುಳ್ಳು ಮಾಹಿತಿ ನೀಡಿ ಸಾಲ ಪಡೆದಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ವ್ಯವಸ್ಥೆ ಮುಂದುವರೆಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು. ತಮ್ಮ ವ್ಯವಸ್ಥೆಯಲ್ಲೂ ಎಲ್ಲ ಸರಿಯಿದೆ ಎಂದು ಹೇಳಲು ಸಾಧ್ಯವಿಲ್ಲ. ಲೋಪ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ಸಫಾಯಿ ಕರ್ಮಚಾರಿಗಳು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಹೆಚ್ಚಿನ ಗೌವರ ಸಂಪಾದಿಸಬೇಕೆಂದರು.
ರಾಜ್ಯದಲ್ಲಿ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲಾಗುತ್ತಿದೆ, ಶೇ. 99 ರಷ್ಟು ಕಡಿಮೆಯಾಗಿದೆ, ಇನ್ನು ಶೇ.1 ರಷ್ಟು ಬಾಕಿ ಉಳಿದಿದ್ದು ಕೆಲವು ಕಡೆ ಇನ್ನು ಗುಂಡಿಗಳನ್ನೇ ಅವಲಂಬಿಸಿರುವುದರಿಂದ ಮಲ ಹೊರುವ ಪದ್ಧತಿ ಜೀವಂತವಾಗಿರುವುಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳನ್ನು ಮಲ ಹೊರುವ ಪದ್ಧತಿಯಿಂದ ವಿಮುಕ್ತಿಗೊಳಿಸಿ ಉದ್ಯಾನವನ ಸಂರಕ್ಷಣೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ನಿಯೋಜನೆ ಮಾಡುವ ಮೂಲಕ ಸ್ವಯಂ ಉದ್ಯೋಗಿಗಳನ್ನಾಗಿ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಸುಮಾರು 80 ಹೆಚ್ಚು ಮಂದಿ ಸರ್ಕಾರದ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಿ  2 ವರ್ಷವಾಗಿದ್ದರೂ ಇದುವರೆಗೂ ಸಹಾಯ ಸಿಕ್ಕಿಲ್ಲ ಎಂದು ಸಭೆಯಲ್ಲಿ ದೂರಿದ್ದಾರೆ. ಒಂದು ಲಕ್ಷ ರು. ಸಾಲ ನೀಡಿ ಅದರಲ್ಲಿ 30 ಸಾವಿರ ರು. ಕಡಿತಗೊಳಿಸುತ್ತಿದ್ದಾರೆಂದು  ದೂರಿದರು. ಈ ಬಗ್ಗೆ ತಮಗೆ ಸ್ಪಷ್ಟವಾದ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಾಕಿ ಇರುವಂತಹ ಅರ್ಜಿಗಳಿಗೆ ಕೂಡಲೇ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ನಿಗಮಕ್ಕೆ ಕಳುಹಿಸುವಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಗುರುಮೂರ್ತಿ, ತಾಲೂಕು ಅಭಿವೃದ್ಧಿ ಅಧಿಕಾರಿ ಬಾಲಾಜಿ, ನಗರಸಭೆಯ ವ್ಯವಸ್ಥಾಪಕ ಶಿವಪ್ರಕಾಶ್ ಹಾಗೂ ಆರೋಗ್ಯಾಧಿಕಾರಿ ರಮೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement