ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಿ

Rashmi Kasaragodu
Updated On : 5 Sept 2013, 12:35 pm

ಕ.ಪ್ರ.ವಾರ್ತೆ   ಕೋಲಾರ   ಸೆ. 4
ಗೌರಿ-ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವ ಮೂಲಕ ರಾಜ್ಯಕ್ಕೆ ಮಾದರಿ ಆಗುವಂತೆ ಜಿಲ್ಲಾಧಿಕಾರಿ ಡಿ.ಕೆ.ರವಿ ವಿವಿಧ ಸಂಘ ಸಂಸ್ಥೆಗಳ ಮುಖಂಡರಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪರಿಸರ ಇಲಾಖೆಯಿಂದ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಹಬ್ಬವಿರಲಿ ಎಲ್ಲಾ ಧರ್ಮ, ಜಾತಿಗಳ ಮುಖಂಡರು ಒಗ್ಗಟ್ಟಿನಿಂದ ಹಾಗೂ ಒಳ್ಳೆಯ ಮನಸ್ಸಿನಿಂದ ಹಬ್ಬ ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ-ನೆಮ್ಮದಿ ವೃದ್ಧಿಗೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಪರಿಸರಕ್ಕೆ ಹಾನಿಯಾಗುವ ಬಣ್ಣದ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಬದಲು ಮಣ್ಣಿನ ಮೂರ್ತಿಗಳನ್ನು ಉಪಯೋಗಿಸುವ ಮೂಲಕ ಮುಂದೆ ಆಗುವ ತೊಂದರೆ ತಪ್ಪಿಸಿ ಎಂದ ಅವರು, ಹಬ್ಬದ ದಿನ ನೀರು, ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಹಿಂದೆ ಜಾರಿಗೊಳಿಸಿರುವ ನಿಮಯಗಳ ಪ್ರಕಾರವೇ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಬೇಕು. ಪೊಲೀಸರ ಅನುಮತಿ ಇಲ್ಲದೆ ಮೆರವಣಿಗೆ ಮಾರ್ಗ ಬದಲಿಸಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಪೊಲೀಸ್, ನಗರಸಭೆ, ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯಬೇಕು, ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದರು.
ವಿಸರ್ಜನೆಗೆ ಅಗತ್ಯ ಸೌಲಭ್ಯ: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಈ ಹಿಂದಿನ ರೀತಿಯಲ್ಲೇ ಕೋಲಾರಮ್ಮ ಕರೆಯಲ್ಲಿ ಹೊಂಡ ನಿರ್ಮಿಸಿ ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಹಬ್ಬ ಆಚರಿಸಬೇಕೆಂದು ತಿಳಿಸಿದರು. ನಗರದ ಟೇಕಲ್ ವೃತ್ತದ ಬಳಿಯ ಶ್ರೀ ವೇಣುಗೋಪಾಲಸ್ವಾಮಿ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶವಿಲ್ಲ. ಅಲ್ಲಿನ ನೀರು ಶುದ್ಧವಾಗಿಲ್ಲ. ಗಣೇಶ ಮೂರ್ತಿ ಅಲ್ಲಿ ವಿಸರ್ಜನೆ ಮಾಡುವುದರಿಂದ ಪಾವಿತ್ರ್ಯತೆ ಹಾಳಾಗುವುದಲ್ಲದೆ, ಪರಿಸರಕ್ಕೆ ಇನ್ನಷ್ಟು ಹಾನಿ ಆಗುತ್ತದೆ ಎಂದು ಸಮತಾ ಸೈನಿಕ ದಳದ ಮುಖಂಡ ಪಂಡಿತ್ ಮುನಿವೆಂಕಟಪ್ಪನವರ ಕೋರಿಗೆ ಉತ್ತರ ನೀಡಿದರು. ನಗರಸಭೆ ಸದಸ್ಯ ಮುರಳಿಗೌಡ, ಪರಿಸರ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಹಬ್ಬ ಇದ್ದಾಗ ಸಭೆ ನಡೆಸುವ ಅಧಿಕಾರಿಗಳು ಮುಂಚಿತವಾಗಿ ಗೌರಿ-ಗಣೇಶ ತಯಾರಿಸುವ ಉದ್ದಿಮೆದಾರರನ್ನು ಕರೆಸಿ ಬಣ್ಣದ ಮೂರ್ತಿಗಳನ್ನು ತಯಾರಿಸದಂತೆ ಹಾಗೂ ಮಾರಾಟ ಮಾಡದಂತೆ ಸೂಚಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.
ಶ್ರೀ ವಿವೇಕಾನಂದ ಮಿತ್ರ ಬಳಗ ಮುಖಂಡ ಓಂಶಕ್ತಿ ಚಲಪತಿ, ಪ್ರತಿಯೊಂದು ಹಬ್ಬ ಎಲ್ಲಾ ಜಾತಿ-ಜನಾಂಗದ ಸಹಕಾರದಿಂದ ನಡೆಯಬೇಕು. ಮುಸ್ಲಿಮರು ಹಿಂದೂ ಹಬ್ಬಕ್ಕೆ, ಹಿಂದೂಗಳು ಮುಸ್ಲಿಮರ ಹಬ್ಬಕ್ಕೆ ಪರಸ್ವರ ಸಹಕಾರ, ಆಹ್ವಾನದ ಮೂಲಕ ನಡೆಸಿದರೆ ಕೋಲಾರದಲ್ಲಿ ಭಾವೈಕ್ಯತೆ ಹೆಚ್ಚುತ್ತದೆ ಎಂದರು.
ಹಿರಿಯ ಪತ್ರಕರ್ತ ಕೆ.ಪ್ರಹ್ಲಾದರಾವ್, ತಿಗಳರ ಸಂಘದ ಮುಖಂಡ ಪಾಲ್ಗುಣ, ಬಿಜೆಪಿಯ ಮುಖಂಡ ಕೆಂಬೋಡಿ ನಾರಾಯಣಸ್ವಾಮಿ, ಕನಕ ಕ್ರೀಡಾ ಸಂಘದ ಮುಖಂಡ ಅಂಚೆ ಅಶ್ವತ್ಥ್, ಹಿರಿಯ ವಕೀಲ ಶ್ರೀಕೃಷ್ಣ, ಮನ್ವಂತರ ಪ್ರಕಾಶದ ಅನಂತರಾಮ್ ಇತರರು ವಿದ್ಯುತ್ ಸಮಸ್ಯೆ, ನೀರಿನ ಬವಣೆ ಹಾಗೂ ಪರಿಸರ ಇಲಾಖೆಯ ಕಾರ್ಯವೈಖರಿ ಬಗ್ಗೆ ಗಮನ ಸೆಳೆದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀಲ್ ಪಾಷಾ ಅವರು, ಈ ಹಿಂದಿನ ರೀತಿಯಲ್ಲೇ ಮೆರವಣಿಗೆ ಮಾರ್ಗ ಮುಂದುವರಿಯಲಿ ಎಂದು ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾವ್‌ನಿವಾ ಸಫಟ್ ಮಾತನಾಡಿ, ಕಡ್ಡಾಯವಾಗಿ ಮೈಕ್, ಪೆಂಡಾಲ್‌ಗೆ ಅನುಮತಿ ಪಡೆಯಬೇಕು, ಪರಿಸರ ಹಾಗೂ ಪ್ರಾಣಕ್ಕೆ ಹಾನಿಯಾಗುವ ಜೋರು ಶಬ್ಧದ ಪಟಾಕಿಗಳನ್ನು ಸಿಡಿಸಬಾರದು, ಮೆರವಣಿಗೆಯ ಮಾರ್ಗ ಬದಲಾಯಿಸಬಾರದು, ಹಬ್ಬ ಮುಗಿದ ನಂತರ ಪೆಂಡಾಲ್ ತೆರವು ಮಾಡಿಸಬೇಕೆಂದು ತಿಳಿಸಿದರು. ಕರ್ನಾಟಕ ಟಿಪ್ಪು ಸೆಕ್ಯೂಲರ್ ಸೇನೆಯ ಜಿಲ್ಲಾಧ್ಯಕ್ಷ ಆಸೀಬ್ ಹಾಗೂ ರೇಲ್ವೆ ಸಲಹಾ ಸಮಿತಿ ಸದಸ್ಯ ಮಹಮದ್ ರಂಜಾನ್ ಹಬ್ಬದ ಸಮಯದಲ್ಲಿ ನೀರಿಗೆ ತೊಂದರೆ ಆಗಿತ್ತು. ಅದೇ ರೀತಿ ಗಣೇಶ ಹಬ್ಬಕ್ಕೆ ಆಗದಂತೆ ಎಚ್ಚರ ವಹಿಸಬೇಕೆಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್, ಡಿವೈಎಸ್ಪಿ ಶ್ರೀ ಹರಿಬರಗೂರು, ಪರಿಸರ ಅಧಿಕಾರಿ ಮರಿ ಮಾದಯ್ಯ, ಜಿಲ್ಲಾ ವಕ್ಷ್ ಬೋರ್ಡಿನ ಮಾಜಿ ಅಧ್ಯಕ್ಷ ಇಕ್ಬಾಲ್, ವಕೀಲ ನರಸಿಂಹಮೂರ್ತಿ, ಬೆಸ್ಕಾಂ ಅಧಿಕಾರಿ ರಮೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement