ಗುಂಪುಗಳ ಮಾರಾಮಾರಿ
ಬಂಗಾರಪೇಟೆ: ಎರಡು ದಿನಗಳ ಹಿಂದೆ ವೀರಶೈವ ಸಮಾಜದ ನಾಲ್ವರು ಸ್ವಾಮೀಜಿಗಳು ಮಂಟಪಕ್ಕೆ ಬೀಗ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಇದು ವೀರಶೈವ ಸಮಾಜದಿಂದ ನಡೆಯುತ್ತಿದೆ ಅಲ್ಲದೆ ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ಇಟ್ಟಿಲ್ಲ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಮಾಜದ ನಾಲ್ವರು ಸ್ವಾಮೀಜಿಗಳನ್ನು ಕರೆಸಿ ಒಂದು ಗುಂಪು ಕಲ್ಯಾಣ ಮಂಟಪಕ್ಕೆ ಬೀಗ ಹಾಕಿಸಿದ್ದರು. ಬುಧವಾರ ರಾತ್ರಿ ಬೀಗ ಹೊಡೆದು ಒಳ ಪ್ರವೇಶ ಮಾಡುತ್ತಿದ್ದಂತೆ ಮಾಜಿ ಟ್ರಸ್ಟಿ ಶಿವನಂಜಪ್ಪನವರ ಮಕ್ಕಳಾದ ಬಾಬು ಮತ್ತು ಶಿವಶಂಕರ್ ಮತ್ತು ತಂಡ ಏಕಾಏಕಿ ಬಂದು ಟ್ರಸ್ಟಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ನಂತರ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ ಇದರ ಪರಿಣಾಮವಾಗಿ ಸರ್ಪಭೂಷಣ್ ಮತ್ತು ಅ.ಪು. ಬಸವರಾಜು ತಲೆಗೆ ತೀವ್ರವಾಗಿ ಗಾಯಗಳಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.ವೀರಶೈವ ಸಮಾಜದವರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದವರು ಈಗ ಕ್ಷುಲ್ಲಕ ಕಾರಣಕ್ಕೆ ಬೀದಿಗೆ ಬಿದ್ದಿರುವುದು ನೋಡುಗರ ಟೀಕೆಗೆ ಗುರಿಯಾಗಿದೆ. ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ.