ಬಿಜಿಎಂಎಲ್ ಚಿನ್ನದ ಗಣಿ ಪುನರಾರಂಭಿಸಿ
ಕ.ಪ್ರ.ವಾರ್ತೆ ಕೆಜಿಎಫ್ ಸೆ. 5
ಬಿಜಿಎಂಎಲ್ ಚಿನ್ನದ ಗಣಿಯನ್ನು ಅತಿ ಶೀಘ್ರದಲ್ಲಿ ಪುನರಾರಂಭಿಸಬೇಕು ಮತ್ತು ಕೇಂದ್ರ ಸರ್ಕಾರದ ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶವನ್ನು ರಾಜ್ಯ ಸರ್ಕಾರದ ವಶಕ್ಕೆ ನೀಡಬೇಕು ಇನ್ನು ವಿವಿಧ ಬೇಡಿಕೆಗಳನ್ನು ಈಡೇರಿಸಬೆಕು ಎಂದು ಒತ್ತಾಯಿಸಿ ಕರ್ನಾಟಕ ಸಮತಾ ಸೈನಿಕ ದಳ ವತಿಯಿಂದ ಕೆಜಿಎಫ್ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ಹೋರಾಟವನ್ನು ನಡೆಸಲಾಯಿತು.
2001ರಲ್ಲಿ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗಿವೆ, ಕಾರ್ಮಿಕರ ಕುಟುಂಬಕ್ಕೆ ನೀಡಬೇಕಾದ ಬಾಕಿ ವಿಆರ್‌ಎಸ್ ಬಡ್ಡಿ ಹಣ 52 ಕೋಟಿಯನ್ನು ಕೇಂದ್ರ ಸರ್ಕಾರ ಈವರೆಗೆ ನೀಡದೆ ಕಾರ್ಮಿಕರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಆದ್ದರಿಂದ ಸುಪ್ರೀಂಕೋಟ್ ತೀರ್ಪಿನಂತೆ ಬಿಜಿಎಂಎಲ್ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್ ಮೂಲಕ ಅತಿ ಶೀಘ್ರದಲ್ಲಿ ಪುನರಾರಂಭಿಸಬೇಕು ಮತ್ತು ಕಾರ್ಮಿಕರ ಹಣವನ್ನು ಕೇಂದ್ರ ಸರ್ಕಾರ ಕೂಡಲೇ ಇತ್ಯರ್ಥ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಪ್ರದಾನ ಕಾರ್ಯದರ್ಶಿ ಜಯಕುಮಾರ್ ಚಿನ್ನದ ಗಣಿ ಕೇಂದ್ರ ಸರ್ಕಾರಕ್ಕೆ ಸ್ವಂತವಾದದ್ದು ಅದನ್ನು ಯಾರಿಗೆ ಬೇಕಾದರೂ ಪಟ್ಟಾ ಮಾಡಿಕೊಳ್ಳಿ ಆದರೆ ಕೆಜಿಎಫ್ ನಗರದ ಮಣ್ಣು ಮತ್ತು ಚಿನ್ನದ ಗಣಿ ಪ್ರದೇಶದ ಭೂಮಿ ಕರ್ನಾಟಕಕ್ಕೆ ಸ್ವಂತವಾದದ್ದು ಆದ್ದರಿಂದ ಕಾರ್ಮಿಕರು ಬಾಳುವ ಈ ಪ್ರದೇಶವನ್ನು ಕೆಜಿಎಫ್ ನಗರಸಭೆಗೆ ಸೇರಿಸಬೇಕು ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆಗಳ ಸೌಲತ್ತುಗಳನ್ನು ನೇರವಾಗಿ ಜನರಿಗೆ ತಲುಪುವ ಕೆಲಸವನ್ನು ಯಾವ ರಾಜಕೀಯ ವ್ಯಕ್ತಿಗಳಾಗಲೀ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲೀ ಮಾಡುತ್ತಿಲ್ಲ. ಕೆಜಿಎಫ್ ಕ್ಷೇತ್ರದ ಜನರಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ, ಪಡಿತರ ಚೀಟಿ ಸರಿಯಾಗಿ ವಿತರಿಸುತ್ತಿಲ್ಲ, ಮತದಾರರ ಗುರುತಿನ ಚೀಟಿಯನ್ನು ಇದುವರೆಗೆ ಸಾವಿರಾರು ಮಂದಿಗೆ ವಿತರಿಸಿಲ್ಲ ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿ ವಾರ್ಡ್‌ಗೆ ಭೇಟಿ ನೀಡಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಬಿಜಿಎಂಎಲ್ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಕೋಟ್ಯಾಂತರ ಆಸ್ತಿ ಕಳ್ಳರ ಪಾಲಾಗುತ್ತಿದೆ ಮತ್ತು ನಿರಂತರವಾಗಿ ಬಿನ್ನದ ಗಣಿಗಳಲ್ಲಿ ಕಳ್ಳತನಗಳು ನಡೆಯುತ್ತಿದ್ದರೂ ಬಿಜಿಎಂಎಲ್ ಆಡಳಿತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕಳ್ಳರೊಂದಿಗೆ ಶಾಮೀಲಾಗಿ ಚಿನ್ನದ ಗಣಿಯ ಆಸ್ತಿಯನ್ನು ಲೂಟಿ ಮಾಡುತ್ತಿದ್ದಾರೆ. ಇತ್ತ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬಗಳು ಚಿನ್ನದ ಗಣಿಯ ಪುನರಾರಂಭಕ್ಕೆ ಒತ್ತಾಯಿಸಿ ಹಲವಾರು ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಮತ್ತು ಎದೆಷ್ಟೋ ಕಾರ್ಮಿಕರು ಸಿಲಿಕಾಸಿಸ್ ರೋಗಗಳಿಗೆ ಬಲಿಯಾಗಿದ್ದಾರೆ. ಆದರೆ ಹಣದಾಸೆಗೆ ಕೆಲ ಅಧಿಕಾರಿಗಳು ಇದನ್ನು ಯೋಚಿಸದೆ ಲೂಟಿಯಲ್ಲಿ ನಿರತರಾಗಿದ್ದಾರೆ ಆದ್ದರಿಂದ ಬಿಜಿಎಂಎಲ್ ಆಸ್ತಿಯ ಲೂಟಿ ಬಗ್ಗೆ ಸಿಬಿಐ ತನಿಖೆಗೆ ಹಾಗೂ ಸಿಓಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಧರಣಿ ಪ್ರತಿಭಟನೆಯಲ್ಲಿ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಅನ್ಬರಸನ್, ನಗರಸಭೆ ಸದಸ್ಯ ಪಟಾಸ್ ಸುರೇಶ್, ಕರ್ನಾಟಕ ಸಮತಾ ಸೈನಿಕ ದಳ ಕಾರ್ಯಕರ್ತರರಾದ ಕುಮಾರ್, ಜೇಮ್ಸ್, ಎಸ್. ರವಿ, ಶ್ರೀನಿವಾಸ್, ಮಂಜುನಾಥ್, ಭಾಣಗಿರಿ ರಾಜು, ತಿರುಮೂರ್ತಿ, ವೆಂಕಟೇಶ್, ಕುಮಾರ್, ದಾಮೇಧರನ್, ನವಕುಮಾರ್, ಸತೀಶ್‌ಕುಮಾರ್, ತಮಿಳರಸನ್, ನಂದಕುಮಾರ್, ಸಗಾಯರಾಜ್, ಪ್ರೇಮ್‌ಕುಮಾರ್, ಮಾರ್ಟಿನ್, ಶಿವಪ್ರಕಾಶ್, ರಾಜೇಶ್, ಮುರಳಿ, ದಿನೇಶ್, ರಾಜಶೇಖರ್ ಸೇರಿದಂತೆ ಇತರೆ ಸಂಘಗಳ ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.