ಜಿಪಂ ಅಧಿಕಾರ ಮೊಟಕು ಬೇಡ
ಕ.ಪ್ರ.ವಾರ್ತೆ ಕೋಲಾರ ಸೆ. 6
ಆಡಳಿತ ವಿಕೇಂದ್ರಿಕರಣಕ್ಕಾಗಿ ಜಾರಿ ತಂದ ಪಂಚಾಯತ್ರಾಜ್ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ 1973ರಲ್ಲಿ ಪಂಚಾಯತ್ರಾಜ್ ಕಾಯಿದೆಗೆ ತಿದ್ದುಪಡಿ ತರಲಾಯಿತು. ಆದರೆ, ಸರ್ಕಾರ ಪಂಚಾಯಿತಿಗಳಿಗೆ ಇರುವ ಹಕ್ಕುಗಳನ್ನು ಮೊಟುಕುಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಡಳಿತ ವಿಕೇಂದ್ರಿಕರಣದ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಪಂಚಾಯಿತಿಗಳಿಗೆ ಇರುವ ಅಧಿಕಾರ ಕಸಿದುಕೊಳ್ಳುವ ಬದಲು ಬಲಪಡಿಸಿದಾಗ ಮಾತ್ರ ಗ್ರಾಮೀಣಾಭಿವೃದ್ಧಿ ಹೆಚ್ಚಲು ಸಾಧ್ಯವಾಗುತ್ತದೆ ಎಂದರು.
ಈ ಹಿಂದೆ ಸರ್ಕಾರ ಜಿಲ್ಲಾ ಪಂಚಾಯಿತಿಗಳಿಗೆ ಇದ್ದ ಅಧಿಕಾರ ಕಸಿದುಕೊಳ್ಳಲು ಯತ್ನಿಸಿದ್ದಾಗ ನ್ಯಾಯಾಲಯಕ್ಕೆ ದೂರು ನೀಡಿದ್ದೆ. ಆಗಿನ ವಿಧಾನ ಪರಿಷತ್ ಸಭಾಪತಿಗಳು ನ್ಯಾಯಾಲಯಕ್ಕೆ ದೂರು ನೀಡಬಾರದಾಗಿತ್ತೆಂದು ಹೇಳಿದಾಗ ಅವರಿಗೆ ವಸ್ತುಸ್ಥಿತಿ ವಿವರಿಸಿದಾಗ ನನ್ನ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ್ದರೆಂದು ನೆನಪು ಮಾಡಿಕೊಂಡರು.
ಆಡಳಿತ ವಿಕೇಂದ್ರಕರಣದ ಆಶಯಪೆಟ್ಟಾಗುವ ರೀತಿಯಲ್ಲಿ ಸರ್ಕಾರ ಕಾಯಿದೆಗಳನ್ನು ಜಾರಿಗೆ ತಂದಲ್ಲಿ ತಾವು ವಿರೋಧಿಸುವುದಾಗಿ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿಗೆ ಆದ್ಯತೆ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿರುವುದರಿಂದ ಎಲ್ಲಿ ಗಂಭೀರ ಸಮಸ್ಯೆ ಇದೆಯೋ ಅಂತಹ ಪ್ರದೇಶಗಳಿಗೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾಳೆಯಿಂದಲೇ ಜಿಲ್ಲೆಯ ಪ್ರವಾಸ ಆರಂಭಿಸಿ ಗ್ರಾಮೀಣ ಜನತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ತಮ್ಮನ್ನು ಅವಿರೋಧವಾಗಿ ಜಿಪಂ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ 28 ಸದಸ್ಯರನ್ನು ಅಭಿನಂದಿಸುತ್ತೇನೆ. ಉತ್ತಮ ಆಡಳಿತ ನೀಡಲು ಎಲ್ಲ ಸದಸ್ಯರು, ಅಧಿಕಾರಿಗಳ ಸಹಕಾರ ಪಡೆಯುವೆ. ನನಗೆ ಅಧ್ಯಕ್ಷರನಾಗಲು ಅವಕಾಶ ಕಲ್ಪಿಸಿದ ಜೆಡಿಎಸ್ ಮತ್ತು ಇನ್ನಿತರ ಪಕ್ಷಗಳ ನಾಯಕರಿಗೆ ಋಣಿಯಾಗಿರುತ್ತೇನೆಂದರು.
ಜಿಲ್ಲಾ ಪಂಚಾಯಿತಿಯ ಮೂಲಕ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಇದಕ್ಕೆ ಜಿಲ್ಲೆಯ ಶಾಸಕರು ನೀಡುವ ಉತ್ತಮ ಸಲಹೆ, ಸಹಕಾರ ಸ್ವೀಕರಿಸುತ್ತೇನೆ.
ಆದರೆ, ಜಿಪಂ ಸದಸ್ಯರ ಅಧಿಕಾರ ಹಾಗೂ ಹಕ್ಕು ಮೊಟಕುಗೊಳಿಸಲು ಅವಕಾಶ ನೀಡಲ್ಲ. 1973ರ ಕಾಯಿದೆಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವುದಾಗಿ ನುಡಿದರು.
ನಿರ್ಧಾರಕ್ಕೆ ಬದ್ಧ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿರುವ ಜೆಡಿಎಸ್ ಪಕ್ಷದ ವರಿಷ್ಠರು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತೂಪಲ್ಲಿ ನಾರಾಯಣಸ್ವಾಮಿ ಉತ್ತರಿಸಿದರು.
ಅಧ್ಯಕ್ಷನಾಗಿ ಎಷ್ಟು ದಿನ ಇರಬೇಕೆಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಈ ಸಂಬಂಧ ಈಗ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥ್ಗೌಡ, ಉತ್ತಮ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತುರ್ತಾಗಿ ನೀರಿನ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಮಾತನಾಡಿ, ನಮ್ಮ ತಾಲೂಕಿನವರಾದ ತೂಪಲ್ಲಿ ನಾರಾಯಣಸ್ವಾಮಿ ಜಿಪಂ ಅದ್ಯಕ್ಷರಾಗಿರುವುದಕ್ಕೆ ಸಂತಸವಾಗಿದೆ. ಜೆಡಿಎಸ್ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ ಎಂಬುದಕ್ಕೆ ಅವಿರೋಧ ಆಯ್ಕೆಯೇ ಸಾಕ್ಷಿ ಎಂದರು.