ಜೆಡಿಎಸ್ ಪಟ್ಟಾಭಿಷೇಕಕ್ಕೆ ಕಮಲ ಬೆಂ'ಬಲ'
ಕ.ಪ್ರ.ವಾರ್ತೆ ಕೋಲಾರ ಸೆ. 6
ಜೆಡಿಎಸ್ ಮತ್ತೆ ಕೋಲಾರ ಜಿಲ್ಲಾ ಪಂಚಾಯಿತಿಯ ಆಡಳಿತದ ನೊಗ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪಕ್ಷದ ಹಿರಿಯ ಸದಸ್ಯ ಹಾಗೂ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ ಜಿಪಂ ಸಾಮಾನ್ಯ ಕ್ಷೇತ್ರದ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ ಅಧ್ಯಕ್ಷರಾಗಿ, ಮುಳಬಾಗಲು ತಾಲೂಕಿನ ಬೈರಕೂರು ಜಿಪಂ ಪರಿಶಿಷ್ಟ ವರ್ಗಕ್ಕೆ ಮೀಸಲಾದ ಕ್ಷೇತ್ರದ ಸದಸ್ಯೆ ಅಲುಮೇಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೂಪಲ್ಲಿ ನಾರಾಯಣಸ್ವಾಮಿ ಮತ್ತು ಅಲುಮೇಲಮ್ಮ ಅವರ ಪಟ್ಟಾಭಿಷೇಕಕ್ಕೆ ಈ ಬಾರಿ ಬಿಜೆಪಿಯ 6 ಹಾಗೂ ಪಕ್ಷೇತರರಿಬ್ಬರು ಪೌರೋಹಿತ್ಯ ವಹಿಸಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಪಕ್ಷದ ಐವರು, ಬಿಜೆಪಿ ಒರ್ವ ಹಾಗೂ ಪಕ್ಷೇತರ ಸದಸ್ಯರೊಬ್ಬರು ಚುನಾವಣೆಯಿಂದ ದೂರ ಉಳಿದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೂಪಲ್ಲಿ ನಾರಾಯಣಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಲುಮೇಲಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರ ಪರವಾಗಿ ಜೆಡಿಎಸ್ ಪಕ್ಷದ ನಾಗರಾಜು ಮತ್ತು ಎಸ್.ಬಿ. ಮುನಿವೆಂಕಟಪ್ಪ ಸೂಚಕರಾಗಿದ್ದರು.
ಚುನಾವಣೆಗೆ ಸ್ಪರ್ಧಿಸಲು ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಗೌರವ್ ಗುಪ್ತ ಅವರು ನಾಮಪತ್ರ ಪರಿಶೀಲನೆಯ ನಂತರ ತೂಪಲ್ಲಿ ನಾರಾಯಣಸ್ವಾಮಿ ಹಾಗೂ ಅಲುಮೇಲಮ್ಮನವರ ನಾಮಪತ್ರ ಸಿಂಧುವಾಗಿರುವುದನ್ನು ಘೋಷಿಸಿ ನಂತರ ಇವರಿಬ್ಬರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಚುನಾವಣೆ ಪ್ರಕ್ರಿಯೆ ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಜಿಪಂ ಎಂಜಿನಿಯರಿಂಗ್ ವಿಭಾಗದ ಇಇ ದೇವರಾಜ್, ಜಿಪಂ ಉಪ ಕಾರ್ಯದರ್ಶಿ ಬದನೂರು, ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್ ಹಾಗೂ ಜೆಡಿಎಸ್, ಬಿಜೆಪಿ ಸದಸ್ಯರು ಅಭಿನಂದಿಸಿದರು.
ವಿಶೇಷ ಸಭೆಯಲ್ಲಿ ಜೆಡಿಎಸ್ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ಜೆಡಿಎಸ್ ಬೆಂಬಲಿತ ಪಕ್ಷೇತರ ಸದಸ್ಯೆ ಚೌಡೇಶ್ವರಿ ರಾಮಚಂದ್ರ, ಆಶಾ ಲೋಕೇಶ್, ರತ್ನಮ್ಮ ನಂಜೇಗೌಡ, ಪುಷ್ಪಾವತಿ, ಕಿಟ್ಟಪ್ಪ, ಸೋಮಶೇಖರ್, ರತ್ನಮ್ಮ ಗಣೇಶ್, ಶ್ರೀನಿವಾಸ್, ತೂಪಲ್ಲಿ ನಾರಾಯಣಸ್ವಾಮಿ, ಅಲುಮೇಲಮ್ಮ, ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿಯ ಸಿಮೋಲ್ ಮೋಹನ್, ಮುತ್ಯಾಲಮ್ಮ, ನಾರಾಯಣಮ್ಮ, ಯಶೋಧಮ್ಮ, ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ಎಂ.ಎಸ್.ಆನಂದ್ ಹಾಗೂ ಪಕ್ಷೇತರ ಸದಸ್ಯ ಅಮರನಾಥ್ ಇದ್ದರು.
ಕಾಂಗ್ರೆಸ್ ಪಕ್ಷದ ಅ.ಮು.ಲಕ್ಷ್ಮೀ ನಾರಾಯಣ, ವಡಗೂರು ಹರೀಶ್, ನಾರಾಯಣರೆಡ್ಡಿ, ಬಿ.ವಿ. ಕೃಷ್ಣ ಹಾಗೂ ಇಂದಿರಾ ಹಾಗೂ ಮಾಜಿ ಜಿಪಂ ಅಧ್ಯಕ್ಷೆ ಬಿಜೆಪಿಯ ಮಂಜುಳಾ ವೆಂಕಟೇಶ್ ಸಭೆಗೆ ಗೈರು ಹಾಜರಾಗಿದ್ದರು.ಈ ಹಿಂದೆ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತ ಹಾಕಿದ ಬಿಜೆಪಿಯ ಸಿಮೋಲ್ ಮೋಹನ್ ವಿರುದ್ಧ ಮುನಿಸಿಕೊಂಡಿದ್ದ ಬಿಜೆಪಿಯ ಸದಸ್ಯರು ಹಲವರು ಈ ಬಾರಿ ಜೆಡಿಎಸ್ ಅಭ್ಯರ್ಥಿಗಳ ಗೆಲವಿಗೆ ಜೋಡಿಸುವ ಮೂಲಕ ಕಾಂಗ್ರೆಸ್ಗೆ ಅಧಿಕಾರ ಸಿಗುವುದನ್ನು ತಪ್ಪಿಸಿದ್ದಾರೆ.
ಇನ್ನು ವರ್ತೂರ್ ಬಣದ ಹಿರಿಯ ಮುಖಂಡ ಹಾಗೂ ಶಾಸಕ ವರ್ತೂರ್ ಪ್ರಕಾಶ್ ಅವರಿಗೆ ಅಪ್ತರಾಗಿದ್ದ ಅಮರನಾಥ್ ಒಂದು ವಾರದ ಹಿಂದೆ ವರ್ತೂರ್ ಬಣಕ್ಕೆ ಗುಡ್ ಬೈ ಹೇಳಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ಘೋಷಣೆ ಮಾಡಿದ್ದರು.
ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಶಾಸಕ ವರ್ತೂರ್ ಪ್ರಕಾಶ್ ಅವರಿಗೆ ಶಾಕ್ ನೀಡಬಹುದೆಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು.
ಆದರೆ, ಬಿಜೆಪಿಯ ಐದು ಸದಸ್ಯರೊಂದಿಗೆ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಜೆಡಿಎಸ್ ಪರ ಬೆಂಬಲ ತೋರಿಸುವ ಮೂಲಕ ಕಾಂಗ್ರೆಸ್ ಹಾಗೂ ಶಾಸಕ ವರ್ತೂರ್ ಪ್ರಕಾಶ್ಗೆ ಚಳ್ಳೆಹಣ್ಣು ತಿನಿಸಿದ್ದಾರೆ.
ಒಟ್ಟಾರೆ ಬಿಜೆಪಿ-ಜೆಡಿಎಸ್ ಸದಸ್ಯರು ವಿಶೇಷ ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ವರ್ತೂರ್ ಪ್ರಕಾಶ್ ಬಣಕ್ಕೆ ತೀವ್ರ ಮುಖಭಂಗ ಉಂಟುಮಾಡಿವೆ.