ಪರವಾನಗಿ ಇಲ್ಲದ ಖಾಸಗಿ ಬಸ್ ವಶ
ಚಿಂತಾಮಣಿ: ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದ ಬಸ್ಸುಗಳನ್ನು ಆರ್ಟಿಓ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ತಪಾಸಣೆ ನಡೆಸಿ ವಶಪಡಿಸಿಕೊಳ್ಳುವುದಕ್ಕೆ ಯತ್ನಿಸಿದಾಗ ಗುಂಪೊಂದು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಶುಕ್ರವಾರ ಮಧ್ಯಾಹ್ನ ಪಟ್ಟಣದ ಪ್ರವಾಸ ಮಂದಿರ ಬಳಿ ಖಾಸಗಿ ಬಸ್ಸುಗಳನ್ನು ತಡೆದು ಅಧಿಕಾರಿಗಳು ಪರವಾನಗಿ ಹಾಗೂ ತೆರಿಗೆ ಸೇರಿದಂತೆ ಹಲವು ದಾಖಲೆ ಪರಿಶೀಲಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಖಾಸಗಿ ಬಸ್ಸು ಮಾಲೀಕರ ಪರ ಗುಂಪೊಂದು ಅಧಿಕಾರಿಗಳಿಗೆ ಧಮಕಿ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಆಗ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಇದರಿಂದ ಆ ಪ್ರದೇಶದಲ್ಲಿ ಕೆಲ ಸಮಯ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
ಸಂಬಂಧಪಟ್ಟ ಆರ್ಟಿಓ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಮುಂದಾಗಬೇಕು. ಖಾಸಗಿ ಬಸ್ಸು ಮಾಲೀಕರ ಬೀದಿ ಜಗಳಕ್ಕೆ ಕಡಿವಾಣ ಹಾಕಿ ನಾಗರಿಕರು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.