ಬ್ಯಾಂಕಲ್ಲಿ ಗ್ರಾಹಕರಿಗೆ ಕಿರಿಕಿರಿ ಖಂಡಿಸಿ ಪ್ರತಿಭಟನೆ
ಬಂಗಾರಪೇಟೆ: ಪಟ್ಟಣದ ಕೆನರಾ ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳದೆ ಪ್ರತಿದಿನ ದೌರ್ಜನ್ಯದಿಂದ ನಡೆದುಕೊಳ್ಳುತ್ತಾ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು ಈ ಧೋರಣೆ ಸರಿಪಡಿಸಿಕೊಳ್ಳಬೇಕೆಂದು ಆಗ್ರಹಿಸಿ ದಲಿತ ಸಿಂಹ ಸೇನೆ ಮುಖಂಡರು ಶುಕ್ರವಾರ ಕೆನರಾ ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡಿದರು.
ಇಲ್ಲಿನ ಕೆನರಾ ಬ್ಯಾಂಕಿನ ಸಿಬ್ಬಂದಿ ಹೊಸ ಖಾತೆ ತೆರೆಯಲು ಇಲ್ಲ ಸಲ್ಲದ ದಾಖಲೆಗಳನ್ನು ಕೇಳುವರು ಸಕಾಲಕ್ಕೆ ಎಲ್ಲಾ ದಾಖಲೆಗಳನ್ನು ಒದಗಿಸಿದರು ವಿನಾಕಾರಣ ಸರಿಯಿಲ್ಲ ಎಂದು ಅಲೆದಾಡಿಸುವರು,ಒಂದು ಖಾತೆ ಪ್ರಾರಂಬಿಸಲು ಕನಿಷ್ಠ ಪಕ್ಷ 15ದಿನಗಳು ಕಾಯುಸುವರು.ಇದಲ್ಲದೆ ಬ್ಯಾಂಕಿನ ಸಿಬ್ಬಂದಿ ಗ್ರಾಹಕರಿಗೆ ಯಾವುದೇ ಮಾಹಿತಿ ಒದಗಿಸದೆ ನಿರ್ಲಕ್ಷ್ಯ ಮಾಡುವರು ಇದಲ್ಲದೆ ಸದರಿ ಬ್ಯಾಂಕಿನಿಂದ ಪಟ್ಟಣದಲ್ಲಿ ಎರಡು ಕಡೆ ಎಟಿಎಂ ಸೇವಾ ಕೇಂದ್ರಗಳಿವೆಯಾದರೂ ಒಂದಲ್ಲಿಯೂ ಹಣವಿಲ್ಲದೆ ಗ್ರಾಹಕರಿಗೆ ಹಿಂಸೆಯಾಗುತ್ತಿದೆ.ಪ್ರತಿದಿನ ಇದೇ ಅವ್ಯವಸ್ಥೆಯಿಂದ ಕೂಡಿದೆ ಆದ್ದರಿಂದ ಕೂಡಲೆ ಎಟಿಎಂನಲ್ಲಿ 24ಗಂಟೆಗಳೂ ಹಣ ಸಿಗುವಂತೆ ಮಾಡಬೇಕು, ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಹೊಸ ಖಾತೆ ತೆರೆಯಲು ಗ್ರಾಹಕರನ್ನು ಅಲೆಸದೆ ತ್ವರಿತವಾಗಿ ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಒತ್ತಾಯಿಸಿ ಸುಮಾರು ಒಂದು ಗಂಟೆ ಕಾಲ ಬ್ಯಾಂಕಿನ ಒಳಗೆ ಇತರೆ ಗ್ರಾಹಕರನ್ನು ಬಿಡದೆ ಪ್ರತಿಭಟನೆ ಮಾಡಿದ್ದರಿಂದ ಬ್ಯಾಂಕಿನ ವಹಿವಾಟಿಗೆ ತೊಂದರೆ ಉಂಟಾಯಿತು.ನಂತರ ಬ್ಯಾಂಕಿನ ವ್ಯವಸ್ಥಾಪಕ ಸ್ಥಳಕ್ಕೆ ಬಂದು ತಮ್ಮ ಸಿಬ್ಬಂದಿಯಿಂದ ಉಂಟಾಗಿರುವ ಕೆಲವು ದೋಷಗಳನ್ನು ಸರಿಪಡಿಸಲು ಮುಂದಾಗಿ ಗ್ರಾಹಕರೊಂದಿಗೆ ಸಿಬ್ಬಂದಿ ಉತ್ತಮ ಭಾಂದವ್ಯ ಹೊಂದುವಂತೆ ಕ್ರಮ ಕೈಗೊಳ್ಳುವುದಾಗಿ ನೀಡಿದ ಭರವಸೆ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.