ರಾಧಾಕೃಷ್ಣನ್ ಪುತ್ಥಳಿ ಮರು ಪ್ರತಿಷ್ಠಾಪನೆ
ಕೋಲಾರ: ನಗರದ ಪಿಸಿ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದುಷ್ಕರ್ಮಿಗಳಿಂದ ಹಾನಿಗೊಂಡಿದ್ದ ಭಾರತ ರತ್ನ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುತ್ಥಳಿಯನ್ನು ಬೇರ್ಪಡಿಸಿ ಹೊಸ ಪ್ರತಿಮೆಅನಾವರಣಗೊಳಿಸಲಾಗಿದೆ.
ಕೆಲವು ತಿಂಗಳ ಹಿಂದೆ ಡಾ. ರಾಧಾಕೃಷ್ಣನ್ ಅವರ ಪುತ್ಥಳಿಯನ್ನು ಯಾರೋ ದುಷ್ಕರ್ಮಿಗಳು ನಾಶಪಡಿಸಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿತ್ತು. ಶಾಲಾ ಆಡಳಿತ ಮಂಡಳಿಯವರು ಮತ್ತೆ ಹೊಸ ಪುತ್ಥಳಿಯನ್ನು ತರಿಸಿ ಸೆ.5ರಂದು ಶಿಕ್ಷಕರ ದಿನಾಚರಣೆಯಂದು ಮರು ಪ್ರತಿಷ್ಠಾಪನೆಗೊಳಿಸುವ ಮೂಲಕ ಮಾಜಿ ರಾಷ್ಟ್ರಪತಿಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಆದರೆ, ಪ್ರತಿಮೆಗೆ ಯಾವುದೇ ಭದ್ರತೆ ಕಲ್ಪಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ಡಾ. ರಾಧಾಕೃಷ್ಣನ್ ಪ್ರತಿಮೆಗೆ ಇನ್ನು ಮುಂದೆ ಯಾವುದೇ ರೀತಿಯಲ್ಲೂ ಹಾನಿ ಆಗದಂತೆ ಪ್ರತಿಮೆ ಸುತ್ತಲು ಕಬ್ಬಿಣದ ಇಲ್ಲವೇ ಇಟ್ಟಿಗೆಯ ಬಾಕ್ಸ್ ನಿರ್ಮಿಸಿ ಇದಕ್ಕೆ ಬಾಗಿಲು ಅಳವಡಿಸುವ ಮೂಲಕ ಭದ್ರತೆ ಒದಗಿಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಶಿಕ್ಷಕರ ದಿನಾಚರಣೆ ದಿನ ಹಮ್ಮಿಕೊಂಡಿದ್ದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ರೇಲ್ವೆ ಸಲಹಾ ಸಮಿತಿ ಸದಸ್ಯ ಕೆ. ಜಯದೇವ್, ನಿವೃತ್ತ ಶಿಕ್ಷಕ ಪಿ.ಎಂ ವೆಂಕಟಪತಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಮುನಿವೆಂಕಟಮ್ಮ, ಶಿಕ್ಷಕರಾದ ಪ್ರಭಾವತಮ್ಮ, ಕವಿತಮ್ಮ, ಬಿ.ಆರ್. ಸುಜಾತ ವಿ. ಆರತಿ, ಇ. ಸ್ವರ್ಣಲತಾ, ಸುಧಾಕರ್ ಇದ್ದರು.