ವ್ಯಾಸಂಗ ದಿಸೆಯಲ್ಲೇ ಆದರ್ಶ ಮೈಗೂಡಲಿ
ಕ.ಪ್ರ.ವಾರ್ತೆ ಕೋಲಾರ ಸೆ. 6
ನಗರದ ಸರ್ಕಾರಿ ಕಾಲೇಜಿಗೆ ಕೀರ್ತಿ ತಂದುಕೊಟ್ಟಿರುವ ನಿವೃತ್ತ ಪ್ರಾಂಶುಪಾಲ ರಾಮಕೃಷ್ಣ ಉಡುಪರ ಆದರ್ಶಗಳನ್ನು ಪ್ರತಿಯೊಬ್ಬ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಗಮನ ನೀಡಬೇಕೆಂದು ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್ ಕರೆ ನೀಡಿದರು.
ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಪ್ರತಿ ಗುರುವಾರ ನಡೆಯುವ ವಿದ್ಯಾರ್ಥಿ ಸಮಾವೇಶದ 4ನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಾಮಕೃಷ್ಣ ಉಡುಪ ಅವರು ಈ ಕಾಲೇಜಿನ ಪ್ರಗತಿಗೆ ಅಹರ್ನಿಶಿ ದುಡಿದಿದ್ದಾರೆ. ಹಾಗಾಗಿ ನಗರದ ಜನತೆ ಉಡುಪರ ಮೇಲಿನ ಅಭಿಮಾನ,ಗೌರವದಿಂದ ಕಾಲೇಜಿನ ಮುಂಭಾಗದ ರಸ್ತೆಗೆ ಇವರ ಹೆಸರು ಇಡಲಾಗಿದೆ, ಅದೇ ರೀತಿಯ ಕೀರ್ತಿಯನ್ನು ಸಂಪಾದಿಸಲು ವಿದ್ಯಾರ್ಥಿಗಳು ಶ್ರಮಿಸಬೇಕೆಂದರು.
ವಿದ್ಯಾರ್ಥಿಗಳು ಕೇವಲ ಪಠ್ಯದ ಕಡೆ ಆಸಕ್ತಿ ತೋರಿದರೆ ಸಾಲದು, ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಸ್ಕೃತಿಯ ಕಡೆಯೂ ಒಲವು ತೋರುವ ಮೂಲಕ ವ್ಯಕ್ತಿ ವಿಕಸನಕ್ಕೆ ಮುಂದಾಗಬೇಕೆಂದರು.
ಕಾಲೇಜಿನ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಿ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನ ಸಂಪಾದಿಸಿ, ಉತ್ತಮ ನಡವಳಿಕೆಯ ಮೂಲಕ ಸಮಾಜಕ್ಕೆ ಮಾದರಿಯಾಗಿ ಎಂದು ಸಲಹೆ ನೀಡಿದರು.
ಪತ್ರಕರ್ತ ಕೆ. ನರಸಿಂಹಮೂರ್ತಿ ಅವರು ಪ್ರತಿ ಗುರುವಾರ ನಡೆಯುವ ವಿದ್ಯಾರ್ಥಿ ಸಮಾವೇಶ ಕಾಲೇಜಿನ ಪ್ರಗತಿಗೆ ಪೂರಕವಾಗಿರಬೇಕು, ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾಗಬೇಕು ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ, ಜಿಲ್ಲಾ ಗೃಹ ರಕ್ಷಕ ದಳದ ಮಾಜಿ ಕಮಾಂಡೆಂಟ್ ಬಿ. ಸುರೇಶ್ ಮಾತನಾಡಿ, ಸಮಾಜದ ಅಂಕು-ಡೊಂಕು ತಿದ್ದುವ ಪ್ರಯತ್ನವಾಗಿ ವಿದ್ಯಾರ್ಥಿಗಳು ಪ್ರಬಂಧಗಳನ್ನು ಬರೆಯುವುದನ್ನು ಕಲಿಯಬೇಕು, ಎನ್.ಎಸ್.ಎಸ್ ಮತ್ತು ಎನ್.ಸಿ.ಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಶಿಸ್ತಿನ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳುವಂತೆ ತಿಳಿಸಿದರು.
ಮತ್ತೊಬ್ಬ ಹಳೆಯ ವಿದ್ಯಾರ್ಥಿ ಓಂಶಕ್ತಿ ಚಲಪತಿ, ಕಾಲೇಜಿನ ಅಭಿವೃದ್ಧಿಗೆ ಕೈಲಾದಷ್ಟು ಸಹಕಾರ ನೀಡುವುದಾಗಿ ತಿಳಿಸಿದರು.
ಕಾಲೇಜಿನ ಉಪನ್ಯಾಸಕರ ಬಗ್ಗೆ ವಿದ್ಯಾರ್ಥಿಗಳು ಗೌರವ ಸೂಚಿಸುವುದಲ್ಲದೆ, ಉತ್ತಮ ನಡವಳಿಕೆಗಳ ಮೂಲಕ ದೇಶಕ್ಕೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಪ್ರೊ. ವೆಂಕಟೇಸು ಅಧ್ಯಕ್ಷತೆ ವಹಿಸಿದ್ದರು. ಮನ್ವಂತರದ ಅನಂತರಾಮ್, ಎನ್.ಎಸ್.ಎಸ್ ಅಧಿಕಾರಿ ರಾಮಕೃಷ್ಣಯ್ಯ,ಎನ್.ಸಿ.ಸಿ ಅಧಿಕಾರಿ ಲಾರೆನ್ಸ್ ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕರು ಇದ್ದರು. ವಿಜ್ಞಾನ ವಿದ್ಯಾರ್ಥಿಗಳಾದ ಧಮೋದರ್ ಗುಪ್ತ ಸ್ವಾಗತಿಸಿ, ಕೆ.ವಿ. ಕಿಶೋರ್ ನಿರೂಪಿಸಿ, ಮಹೇಂದ್ರ ಕೌಶಿಕ್ ವಂದಿಸಿದರು.