ಶಾಂತಿ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಿ: ಎಸ್ಪಿ ಶಿವಪ್ರಸಾದ್ ಮನವಿ
ಕ.ಪ್ರ. ವಾರ್ತೆ ಚಿಂತಾಮಣಿ ಸೆ.6
ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಪಟ್ಟಣದ ನಾಗರಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸರು ಆಯೋಜಿಸಲಾಗಿದ್ದ ವಿವಿಧ ಸಂಘ- ಸಂಸ್ಥೆಗಳ ನೆರವಿನೊಂದಿಗೆ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪಟ್ಟಣದಲ್ಲಿ ಪರವಾನಗಿ ಇಲ್ಲದೆ ಗಣೇಶನ ಮೂರ್ತಿ ಇಡಲು ಅವಕಾಶವಿಲ್ಲ ಹಾಗೂ ಇಡುವ ಸ್ಥಳದ ಬಗ್ಗೆ ಪೊಲೀಸರ ಕಡೆಯಿಂದ ಪರವಾನಗಿ ಪಡೆಯಲು ಕಡ್ಡಾಯವೆಂದು ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಸಾದ್ ಹೇಳಿದರು.
ಪಟ್ಟಣದ ಶಾಂತಿ ಭದ್ರತೆಗಾಗಿ ಸಾರ್ವಜನಿಕರು ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಬಗ್ಗೆ ನಿಗಾ ಇಟ್ಟು ಪೊಲೀಸರಿಗೆ ಸಹಕಾರ ನೀಡಬೇಕೆಂದು ಕೋರಿದರು.
ಗಣೇಶನ ಮೂರ್ತಿ ವಿಸರ್ಜನೆ ವೇಳೆ ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು. ನಗರಸಭೆ ಆಯುಕ್ತ ಚನ್ನೇಗೌಡ, ಬೆಸ್ಕಾಂ ಅಧಿಕಾರಿ ಕೃಷ್ಣಾರೆಡ್ಡಿ, ವೃತ್ತ ನಿರೀಕ್ಷಕ ನಂಜಪ್ಪ, ಇನ್ಸ್ಪೆಕ್ಟರ್ ಮುರಳಿ, ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಡಿ.ಸಾದಪ್ಪ, ಜಿಯಾವುಲ್ಲಾ ರೆಹಮಾನ್, ಆರಿಫ್, ನಟರಾಜ್,ಪ್ರಕಾಶ್, ಅಣ್ಣು, ಮಂಜುನಾಥ್, ಕೃಷ್ಣಪ್ಪ, ಸುಜಾತಮ್ಮ ಶಿವಣ್ಣ, ಡಿಎಸ್ಎಸ್ ಮುಖಂಡರಾದ ಶ್ರೀರಾಮಪ್ಪ, ಲಕ್ಷ್ಮಿನಾರಾಯಣ, ವೆಂಕಟರವಣಪ್ಪ ಇತರರು ಇದ್ದರು.