ಶಾಲಾ ವಾಹನ ಚೆಲ್ಲಾಟ: ವಿದ್ಯಾರ್ಥಿ ವೃಂದಕ್ಕೆ ಸಂಕಟ
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ವಾಹನಗಳು ಪದೇ ಪದೇ ಅಪಘಾತಗಳಿಗೆ ಗುರಿಯಾಗುತ್ತಿದ್ದರೂ ಸಹ ಶಿಕ್ಷಣ ಸಂಸ್ಥೆಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.
ಇದು ಅಪಾಯಕಾರಿ ಎಂದು ತಿಳಿದಿದ್ದರೂ ದೊಡ್ಡಿಗೆ ಕುರಿಗಳನ್ನು ತುಂಬುವಂತೆ ಶಿಕ್ಷಣ ಸಂಸ್ಥೆ ವಾಹನಗಳಲ್ಲಿ ಪ್ರತಿದಿನ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುತ್ತಿರುವಂತಹುದು ನಡೆಯುತ್ತಲೇ ಇದೆ.
ಶುಲ್ಕದ ಮೇಲಷ್ಟೆ ಪ್ರೀತಿ: ಕೆಲ ಶಾಲೆಗಳು ಗ್ರಾಮೀಣ ಪ್ರದೇಶಗಳಿಂದಲೂ ಕರೆದುಕೊಂಡು ಬರಲು ಬಸ್ ಸೇವೆ ಒದಗಿಸಿವೆ. ಇದಕ್ಕಾಗಿ ಅನಧಿಕೃತ ಶಾಲಾ ಪ್ರವೇಶ ಶುಲ್ಕದ (ಡೊನೇಷನ್) ಜತೆಗೆ ಹೈಟೆಕ್ಬಸ್ ಸೇವೆ ಎಂದು ದುಬಾರಿ ಹಣವನ್ನು ವಿದ್ಯಾರ್ಥಿಗಳ ಪೋಷಕರಿಂದ ಸುಲಿಗೆ ಮಾಡುತ್ತಿದ್ದು ಹೆಚ್ಚಿಗೆ ಶುಲ್ಕ ವಸೂಲಿ ಮಾಡುವುದರಲ್ಲಿ ತೋರಿಸುತ್ತಿರುವ ಕಾಳಜಿಯನ್ನು ವಿದ್ಯಾರ್ಥಿಗಳ ಸುಗಮ ಪ್ರಯಾಣದ ವಿಷಯದಲ್ಲಿ ತೋರುತ್ತಿಲ್ಲ.
ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಾಹನಗಳನ್ನು ಹೊಂದಿರದ ಕಾರಣ ವಿದ್ಯಾರ್ಥಿಗಳು ವಾಹನಗಳಲ್ಲಿ ಪ್ರತಿನಿತ್ಯ ಕುಳಿತುಕೊಳ್ಳಲು ಸೀಟಿಲ್ಲದೆ, ನಿಂತುಕೊಳ್ಳಲು ಜಾಗ ಇಲ್ಲದೆ ಪರದಾಡುತ್ತಿದ್ದಾರೆ. ಸೀಟಿನ ಮೇಲೆ ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡಿರುತ್ತಾರೆ. ಮತ್ತೆ ಹಲವರು ಬೆನ್ನಿಗೆ ಬ್ಯಾಗು ತಗುಲಿ ಹಾಕಿಕೊಂಡು ವಾಹನದ ಬಾಗಿಲಿನ ಹೊರಕ್ಕೂ ಬಂದು ನಿಂತುಕೊಳ್ಳಲು ಹರಸಾಹಸ ಮಾಡುತ್ತಿರುತ್ತಾರೆ. ಇಂತಹ ದೃಶ್ಯ ಶಾಲಾ ಕಾಲೇಜುಗಳ ವಾಹನ ನೋಡಿದರೆ ಪ್ರತಿನಿತ್ಯ ಕಂಡು ಬರುತ್ತದೆ.
ಈಗಲೇ ಎಚ್ಚೆತ್ತುಕೊಳ್ಳಬೇಕು: ಶಾಲಾ-ಕಾಲೇಜು ವಾಹನಗಳ ಅಪಘಾತವಾದಾಗ ನಾಟಕವಾಡುವುದರ ಬದಲು ಈಗಲೇ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಮತ್ತು ಗಮನಹರಿಸಬೇಕಾದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.ಇಲ್ಲದಿದ್ದಲ್ಲಿ ಅನಾಹುತಗಳಾದಾಗ ಜವಾಬ್ದಾರಿ ಯಾರಾಗುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಈ ಹಿಂದೆ ದುರ್ಘಟನೆಗಳು ಸಂಭವಿಸಿದಾಗ ಜಿಲ್ಲಾಧಿಕಾರಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೊಗೊಂಡಂತೆ ಸಭೆಯನ್ನು ಕರೆದು, ವಿದ್ಯಾರ್ಥಿಗಳ ಸುಗಮ ಸಂಚಾರ ಮತ್ತು ಶಾಲಾ ಕಾಲೇಜು ಬಸ್ಸುಗಳ ಕಾರ್ಯ ನಿರ್ವಹಣೆಯ ಬಗ್ಗೆ ಚರ್ಚಿಸಲಾಗಿತ್ತು. ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಕೆಲ ನಿಯಮಾವಳಿಗಳನ್ನು ರೂಪಿಸಿ ಶಿಕ್ಷಣ ಸಂಸ್ಥೆಗಳಿಗೆ ಕಟ್ಟು ನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆಯನ್ನು ನೀಡಿತ್ತು. ಚಾಲಕರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿಯನ್ನು ಹೊಂದಿರುವುದಲ್ಲದೆ, ಕಾಲ-ಕಾಲಕ್ಕೆ ನವೀಕರಣ ಮಾಡಿಸಿಕೊಳ್ಳಬೇಕು. ಮಾತ್ರವಲ್ಲ, ಬಸ್ಸಿನಲ್ಲಿ ತಲಾ ಒಬ್ಬರು ನಿರ್ವಾಹಕರು ಮತ್ತು ಸಿಬ್ಬಂದಿ ಇದ್ದು ವಿದ್ಯಾರ್ಥಿಗಳನ್ನು ವಾಹನಕ್ಕೆ ಹತ್ತಿಸಿಕೊಳ್ಳುವುದು, ಇಲ್ಲವೇ ಇಳಿಸಿಕೊಳ್ಳುವಾಗ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸಂಚರಿಸುವಾಗ ವಾಹನದ ಬಾಗಿಲನ್ನು ಹಾಕಿರಬೇಕು. ಇನ್ನೂ ವಾಹನಗಳನ್ನು ಸ್ಥುಸ್ಥಿತಿಯಲ್ಲಿಟ್ಟುಕೊಳ್ಳುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಬೇಕು. ಅಲ್ಲದೆ, ಆಗಾಗ ಸಭೆ ಕರೆದು ಚರ್ಚಿಸಿ ಚಾಲಕರಿಗೆ ವಾಹನವನ್ನು ಯರ್ರಾಬ್ರಿರಿ ಓಡಿಸದಂತೆ ಸಲಹೆ ಸೂಚನೆಗಳನ್ನು ನೀಡಬೇಕೆಂದೆಲ್ಲಾ ತಿಳಿಸಲಾಗಿತ್ತು. ಪ್ರಾರಂಭದಲ್ಲಿ ನಿಯಮ ಪಾಲಿಸುವಲ್ಲಿ ಉತ್ಸುಕತೆ ತೋರಿದ ಶಿಕ್ಷಣ ಸಂಸ್ಥೆಗಳು ಈಗ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿವೆ. ಕೇವಲ ಮೇಲ್ನೋಟಕ್ಕೆ ಮಾತ್ರ ಎಲ್ಲಾ ಸರಿ ಇವೆ.
ಇನ್ನು ಸೂಚನೆ ಕೊಟ್ಟಿದ್ದ ಜಿಲ್ಲಾಡಳಿತ ಸಹ ನಿಯಮಾವಳಿಗಳನ್ನು ಶಿಕ್ಷಣ ಸಂಸ್ಥೆಗಳು ಪಾಲಿಸುತ್ತಿವೆಯೇ ಎನ್ನುವುದನ್ನು ಪರಿಶೀಲಿಸುತ್ತಿಲ್ಲ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾಡಳಿತ, ಶಿಕ್ಷಣ ಸಂಸ್ಥೆಗಳು ಎಚ್ಚೆತ್ತುಕೊಳ್ಳಲು ಮತ್ತೊಮ್ಮೆ ದುರ್ಘಟನೆಗಳು ಸಂಭವಿಬೇಕೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ದುರ್ಘಟನೆ ಮರೆತರೆ ಹೇಗೆ?: ಈ ಹಿಂದೆ ತಾಲೂಕಿನ ಹಾರೋಬಂಡೆ ಸಮೀಪ ಬಿಜಿಎಸ್ ಶಾಲೆಯ ವಾಹನವು ಚಾಲಕನ ನಿರ್ಲಕ್ಷ್ಯದಿಂದ ಅಪಘಾತಕ್ಕೆ ಗುರಿಯಾಗಿ ಇಡೀ ಜಿಲ್ಲೆಯಲ್ಲಿಯೇ ದೊಡ್ಡ ಆತಂಕ ಸೃಷ್ಟಿಸಿತ್ತು. ಆಗ ಜವಾಬ್ದಾರಿಯಿಲ್ಲದೆ ಚಾಲಕ ಚಾಲನಾ ಪರವಾನಗಿ ಹೊಂದಿರದ ತನ್ನ ನಿರ್ವಾಹಕನಿಗೆ ಶಾಲಾ ಮಕ್ಕಳಿದ್ದ ವಾಹನವನ್ನು ತರಬೇತಿಗೆ ಓಡಿಸಲು ಕೊಟ್ಟಿದ್ದ. ಇದರ ಪರಿಣಾಮವಾಗಿ ವಾಹನ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಪಲ್ಟಿ ಹೊಡೆದು ರಸ್ತೆಯ ನಡುವೆಯೇ ಉರುಳಿ ಬಿದ್ದಿದಿತ್ತು. ಅಪಘಾತದಿಂದ ಶಾಲಾ ಸಮವಸ್ತ್ರ ಧರಿಸಿದ್ದ ಪುಟಾಣಿ ವಿದ್ಯಾರ್ಥಿಗಳು ತೀವ್ರವಾಗಿ ಪೆಟ್ಟು ಬಿದ್ದು ಆಸ್ಪತ್ರೆ ಸೇರುವಂತಾಗಿತ್ತು.
ಇದು ಮಾತ್ರವಲ್ಲ, ಇನ್ನು ಸಣ್ಣಪುಟ್ಟ ಗಾಯಗಳಾದಂತಹ ಕೆಲ ಪ್ರಕರಣಗಳು ಬೆಳಕಿಗೇ ಬಂದಿಲ್ಲ. ಅಪಾಯದ ಅಂಚಿಕೆಗೆ ಹೋಗಿ ವಿದ್ಯಾರ್ಥಿಗಳು ಭಯಭೀತರಾದಂತಹ ಘಟನೆಗಳಿಗೆ ಲೆಕ್ಕವೇ ಇಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇನ್ನೂ ನುಂದಾದರೂ ಎಚ್ಚೆತ್ತುಕೊಂಡು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಡಕೋಟಾ ಗಾಡಿ ಚಾಲಕರು
ಶಿಕ್ಷಣ ಸಂಸ್ಥೆಗಳ ವಾಹನಗಳನ್ನು ಒಮ್ಮೆ ಪರಿಶೀಲನೆ ನಡೆಸಿದಾಗ ಬಹುತೇಕ ಡಕೋಟಾ ಗಾಡಿಗಳೇ ಹೆಚ್ಚಿಗೆ ಇರುವಂತಹುದು. ಕೆಲ ಶಿಕ್ಷಣ ಸಂಸ್ಥೆಗಳು ಹೆಸರಿಗೆ ಮಾತ್ರ ಹೊಸ ವಾಹನಗಳನ್ನು ಲೆಕ್ಕದಲ್ಲಿಟ್ಟುಕೊಂಡು ಅಸಮರ್ಥವಾಗಿರುವ ಹಳೆಯ ವಾಹನಗಳನ್ನೇ ಈಗಲೂ ಬಳಸುತ್ತಿವೆ. ಸೀಟುಗಳು ಸರಿಯಾಗಿ ಇರುವುದಿಲ್ಲ. ಬಹುತೇಕ ವಾಹನದ ಬಾಗಿಲುಗಳು ಕಿತ್ತು ಹೋಗಿರುತ್ತವೆ. ಕಾರ್ಖಾನೆಗಳಿಂದ ಬರುವಂತೆ ವಾಹನದ ಹಿಂದೆ ಹೆಚ್ಚಿಗೆ ಹೊಗೆ ಬರುತ್ತಿರುತ್ತದೆ. ಹಳೆ ಎಂಜಿನ್ಗಳಿಂದ ವಿಪರೀತ ಕರ್ಕಶ ಶಬ್ಧ ಕೇಳಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ವಾಹನಗಳಾಗಿರುತ್ತವೆ. ಇಷ್ಟಾದರೂ ಸಹ ಶಿಕ್ಷಣ ಸಂಸ್ಥೆಗಳು ಹಣ ಚೌಕಾಸಿ ದೃಷ್ಟಿಯಲ್ಲಿ ಹಳೆಯ ಗಾಡಿಗಳನ್ನು ಓಡಿಸುವುದನ್ನು ನಿಲ್ಲಿಸುತ್ತಿಲ್ಲ. ಇನ್ನೂ ಪ್ರಮುಖವಾಗಿ ಕೆಲ ವಾಹನ ಚಾಲಕರು ನಿಯಂತ್ರಣವಿಲ್ಲದವರಂತೆ ವರ್ತಿಸುತ್ತಿದ್ದು ರೇಸ್ ಎಂಬ ಭಾವನೆಯಲ್ಲಿ ಜನಜಂಗುಳಿಯ ನಡುವೆಯೂ, ರಸ್ತೆ ತಿರುವುಗಳಲ್ಲಿಯೂ ವೇಗವನ್ನೇ ಕಾಯ್ದಿರಿಸಿಕೊಂಡು ವಾಹನವನ್ನು ಓಡಿಸುತ್ತಿದ್ದಾರೆ.ಅಪಾಯ ಎನಿಸಿದರೂ ಸಹ ಮುಂದೆ ಹೋಗುವ ವಾಹನ ಹಿಂದಿಕ್ಕುವುದರಲ್ಲಿಯೇ ರೋಚಕತೆ ಕಾಣುತ್ತಾರೆ.
ನಿತ್ಯದ ನರಕ
ನಗರದ ಹೊರ ವಲಯದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು, ವೃತ್ತಿಪರ ತರಬೇತಿ ಸಂಸ್ಥೆಗಳು ಸೇರಿದಂತೆ ಅನೇಕ ಖಾಸಗಿ ಶಾಲಾ ಕಾಲೇಜುಗಳು ತಮ್ಮ ಶಿಕ್ಷಣ ಸಂಸ್ಥೆಗಳಿಂದಲೇ ವಿದ್ಯಾರ್ಥಿಗಳಿಗಾಗಿ ಬಸ್ ಸೌಲಭ್ಯ ಒದಗಿಸಿವೆ. ಪ್ರತಿನಿತ್ಯ ಬೆಳಗ್ಗೆ ವಿದ್ಯಾರ್ಥಿಗಳನ್ನು ನಗರದಿಂದ ಶಾಲಾ ಕಾಲೇಜುಗಳಿಗೆ ಮತ್ತು ಸಂಜೆ ಶಾಲಾ ಕಾಲೇಜುಗಳಿಂದ ನಗರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುವ ಕಾರ್ಯ ಮಾಡುತ್ತಿವೆ.
ಪ್ರಾಣದೊಂದಿಗೆ ಚೆಲ್ಲಾಟ
ಈ ಮೂಲಕ ಸಂಚಾರಿ ನಿಯಮ, ಸುಗಮ ಸಂಚಾರದ ಬಗ್ಗೆ ಪಾಠ ಹೇಳಿ ಕೊಡುವ ಶಿಕ್ಷಣ ಸಂಸ್ಥೆಗಳೇ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತು ವಿದ್ಯಾರ್ಥಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿವೆ.
ಎನ್.ವೆಂಕಟೇಶ್