ಕಾರ್ಯಾಗಾರದಲ್ಲಿ ಆಸನ ಅವ್ಯವಸ್ಥೆ
ಬಂಗಾರಪೇಟೆ: ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಕುರಿತು ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿವಳಿಕೆ ಮೂಡಿಸಲು ಜಿ.ಪಂ. ಹಾಗೂ ತಾ.ಪಂ. ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರ ಸೂಕ್ತ ವ್ಯವಸ್ಥೆ ಮಾಡದೆ ಆಯೋಜಿಸಿದ್ದರಿಂದ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಆಸನಗಳಿಲ್ಲದೆ ಬಹುತೇಕ ಸದಸ್ಯರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗಬೇಕಾಯಿತು.
ಪ್ರಸಕ್ತ ಸಾಲಿನ ಉದ್ಯೋಗ ಖಾತರಿ ಯೋಜನೆಯಲ್ಲಿ ಬಂದಿರುವ ಹಣವನ್ನು ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹಣ ಕೇಂದ್ರಕ್ಕೆ ವಾಪಸ್ ಹೋಗಲಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಎಲ್ಲಾ ತಾಲೂಕುಗಳಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಜಿಪಂ ಸದಸ್ಯರನ್ನು ಕರೆಸಿ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತಾಪಂ ಒಇ ಡಾ. ಜಗದೀಶ್ ಅವರು ಪಟ್ಟಣದಲ್ಲಿ ಎಲ್ಲಾ ಕಲ್ಯಾಣ ಮಂಟಪಗಳು ಖಾಲಿಯಾಗಿದ್ದರೂ ಸಹ ಹಣ ಪೋಲಾಗುವುದೆಂದು ಕಿರಿದಾದ ಮಿನಿ ಹಾಲೊಂದನ್ನು ಬಾಡಿಗೆಗೆ ಪಡೆದು ಅದರಲ್ಲಿ ತಾಲೂಕಿನ 37 ಪಂಚಾಯ್ತಿ ಸದಸ್ಯರನ್ನು ಹಾಗೂ ಜಿಪಂ ಸದಸ್ಯರನ್ನು ಕೂಡಿಹಾಕಿ ತರಬೇತಿ ನೀಡಲು ಮುಂದಾದರು. ನಿಗದಿತ ಸಮಯಕ್ಕೆ ಎಲ್ಲಾ ಸದಸ್ಯರು ಬಂದರಿಂದ ಅವರಿಗೆಲ್ಲಾ ಕೂರಲು ಆಸನಗಳ ಕೊರತೆ ಎದ್ದು ಕಾಣಿತು. ಸಭೆ ನಡೆಯುತ್ತಿದ್ದರೂ ಸದಸ್ಯರು ಕುರ್ಚಿಗಳಿಗಾಗಿ ಅಲೆಯುತ್ತಿದ್ದರು.
ಇಒ ಜಗದೀಶ್ ಮಾತ್ರ ಸಭೆಯಲ್ಲಿದ್ದರೆ ಹಲವು ಪ್ರಶ್ನೆಗಳನ್ನು ಎದುರಿಸಬೇಕಾದಿತು ಎಂದು ಸ್ಥಳದಿಂದ ಕಾಲ್ಕಿತ್ತರು. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆ ಗ್ರಾಮೀಣ ಬಡ ಕೂಲಿ ಕಾರ್ಮಿಕರಿಗೆ ಮುಟ್ಟಿಸಲು ಅನುಸರಿಸಬೇಕಾದ ಕ್ರಮಗಳನ್ನು ತಿಳಿಯಬೇಕಿದ್ದ ಸದಸ್ಯರಿಗೆ ಅವ್ಯವಸ್ಥೆಯಿಂದ ಯಾವುದನ್ನೂ ಅರಿಯದೆ ಬರಿ ಕೈಯಲ್ಲಿ ತಮ್ಮ ಮನೆಗಳಿಗೆ ವಾಪಸ್ ಹೋಗಬೇಕಾಯಿತು. ಇದರಿಂದ ಕಾರ್ಯಾಗಾರದ ಉದ್ದೇಶ ಮಾತ್ರ ಈಡೇರಲಿಲ್ಲ.