ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೌರಿ-ಗಣೇಶ ಹಬ್ಬ ಆಚರಣೆಗೆ ಸಿದ್ಧತೆ

Rashmi Kasaragodu
Updated On : 8 Sept 2013, 1:00 am

ಕನ್ನಡಪ್ರಭ ವಾರ್ತೆ   ಕೋಲಾರ   ಸೆ.7
ಗೌರಿ-ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಘ್ನ ನಿವಾರಕನ ಆರಾಧನೆಗಾಗಿ ಎಲ್ಲಾ ಕಡೆ ಸಕಲ ಸಿದ್ಧತೆ ನಡೆಯುತ್ತಿದೆ.
ಈ ಬಾರಿ ಬಣ್ಣದ ಗೌರಿ-ಗಣೇಶ ಮೂರ್ತಿಗಳ ಖರೀದಿಗೆ ಬೇಡಿಕೆ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಕೈ ಸುಟ್ಟುಕೊಳ್ಳವಂತಾಗಿದೆ. ಜೊತೆಗೆ ಕೆಲವು ರಾಜಕಾರಣಿಗಳು, ಸಮಾಜ ಸೇವಕರು ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಣೇಶ ಮೂರ್ತಿಗಳನ್ನು ತರಿಸಿ ಸಂಘ-ಸಂಸ್ಥೆಗಳಿಗೆ ಹಾಗೂ ಬಡವರಿಗೆ ಉಚಿತವಾಗಿ ವಿತರಣೆ ಮಾಡುತ್ತಿರುವುದರಿಂದ ವ್ಯಪಾರಿಗಳು ಸಂಕಟಕ್ಕೆ ಒಳಗಾಗಿದ್ದಾರೆ.
2007ರಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಗಣೇಶ ಮೂರ್ತಿಗಳನ್ನು ಹಾಗೂ ಹಬ್ಬ ಆಚರಣೆಗಾಗಿ ಪ್ರತಿ ಸಂಘಕ್ಕೆ 5ರಿಂದ 25 ಸಾವಿರ ರು.ದೇಣಿಗೆ ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಗಣೇಶ ಹಬ್ಬದ ಕಳೆ ಹೆಚ್ಚಿಸಿರುವ ಶಾಸಕ ವರ್ತೂರ್ ಪ್ರಕಾಶ್ ಈ ಬಾರಿ 300ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ತರಿಸಿ ಸಂಘ ಸಂಸ್ಥೆಗಳಿಗೆ ವಿತರಣೆ ಮಾಡುತ್ತಿರುವುದು ವ್ಯಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾ ಆಡಳಿತ ಮತ್ತು ಪರಿಸರ ಇಲಾಖೆಯು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರೆ ನೀಡಿದೆ. ನೀರಿನ ಸಮಸ್ಯೆ ಇರುವುದರಿಂದ ಜನತೆ ಎಚ್ಚೆತ್ತುಕೊಂಡಿದ್ದಾರೆ. ಬಣ್ಣದ ಗೌರಿ-ಗಣೇಶ ನೀರಿನಲ್ಲಿ ಕರಗುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ,ಪರಿಸರಕ್ಕೂ ಇದರಿಂದ ಹಾನಿ ಎಂದು ಅರ್ಥ ಮಾಡಿಕೊಂಡಿರುವ ನಾಗರಿಕರು ಈ ಬಾರಿ ಜೇಡಿ ಮಣ್ಣಿನಿಂದ ತಯಾರಿಸಿರುವ ಮೂರ್ತಿಗಳನ್ನು ಖರೀದಿ ಮಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಐದಾರು ಅಂಗಡಿಗಳು ನಗರದ ಡಿವಿಜಿ ರಸ್ತೆಯಲ್ಲಿ ತಲೆ ಎತ್ತಿದ್ದರೂ ವ್ಯಪಾರ ಜೋರಾಗಿ ನಡೆಯದಿರುವುದರಿಂದ ವ್ಯಪಾರಿಗಳು ಬೇಸತ್ತಿದ್ದಾರೆ. ಗೌರಿ ಹಬ್ಬದ ದಿನದಂದು ಗ್ರಾಮೀಣ ಪ್ರದೇಶದ ಜನತೆ ಗಣೇಶ ಮೂರ್ತಿ ಖರೀದಿಗೆ ಬರುವ ನಿರೀಕ್ಷೆಯಲ್ಲಿದ್ದಾರೆ.
ಹಬ್ಬದ ಸಲುವಾಗಿ ಬಟ್ಟೆ ಅಂಗಡಿಗಳಲ್ಲಿ ವ್ಯಪಾರ ಜೋರಾಗಿ ನಡೆಯುತ್ತಿದೆ, ಯಥಾ ಪ್ರಕಾರ ಪೂಜಾ ಸಾಮಗ್ರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೆ ಏರಿದೆ.
ಸೆ.8 ಗೌರಿ ಹಾಗೂ ಸೆ.9ರಂದು ಗಣೇಶ ಹಬ್ಬ ಆಚರಣೆಗಾಗಿ ಜನತೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ವಿಶ್ರಾಂತಿ ಪಡೆದಿರುವ ವರುಣ ಹಬ್ಬಕ್ಕೆ ಶುಭ ವಸಂತವನ್ನು ಕರುಣಿಸುತ್ತಾನೆಂಬ ನಂಬಿಕೆ ಜನರದ್ದಾಗಿದೆ.
ಈ ಬಾರಿ ನಗರದ ಕಠಾರಿ ಪಾಳ್ಯದಲ್ಲಿ ಶ್ರೀ ವಿಶ್ವೇಶ್ವರಯ್ಯ ಗಣೇಶೋತ್ಸವ ಸಮಿತಿಯವರು ಹಬ್ಬ ಆಚರಣೆ ಮಾಡದಿರುವುದು ಜನತೆಗೆ ನಿರಾಸೆಯನ್ನುಂಟು ಮಾಡಿದೆ. ಒಂದು ತಿಂಗಳ ಕಾಲ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತಿದ್ದ ಸಮಿತಿಯವರು ನೀರಿನ ಸಮಸ್ಯೆ ಹಾಗೂ ಕಾರ್ಯಕರ್ತರ ಕೊರತೆಯಿಂದ ಹಬ್ಬ ನಿಲ್ಲಿಸಿದ್ದಾರೆ.
ಲೋಕಮಾನ್ಯ ತಿಲಕ್ ಗಣೇಶ ವಿಸರ್ಜನಾ ಸಮಿತಿಯವರು ಈ ಬಾರಿಯೂ ನಗರದ ಮಹಾತ್ಮಗಾಂಧಿ ಉದ್ಯಾನವನದ ಬಳಿ ಗಣೇಶೋತ್ಸವ ಆಚರಣೆಗೆ ವೇದಿಕೆ ನಿರ್ಮಿಸಿದ್ದಾರೆ. ನಗರದ ಪ್ರವಾಸಿ ಮಂದಿರ ಬಳಿ ಅಖಂಡ ಭಾರತ ಗಣೇಶ ಮಹಾಸಭಾ ಹೆಸರಿನಲ್ಲಿ ಗಣೇಶ ಹಬ್ಬ ಆಚರಣಗೆ ಸಿದ್ಧತೆ ನಡೆಯುತ್ತಿದೆ.
ನಗರದಲ್ಲಿ ಈ ವರ್ಷ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಅರ್ಭಟ ಸ್ಥಗಿತಗೊಂಡಿದೆ. ಸಾರ್ವಜನಿಕರಿಂದ ವಸೂಲಿ ಕಡಿಮೆಯಾಗಿದೆ.
ನಗರಸಭೆಯಿಂದ ಗೌರಿ-ಗಣೇಶ ಮೂರ್ತಿಗಳ ವಿಜರ್ಸನೆಗಾಗಿ ನಗರದ ಕೋಲಾರಮ್ಮ ಕರೆಯಲ್ಲಿ ವಿಶೇಷ ಹೊಂಡಗಳನ್ನು ನಿರ್ಮಿಸಲಾಗಿದೆ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿದ್ದಾರೆ.
ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಗಣೇಶ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸುವ ಮೂಲಕ ರಾಜ್ಯಕ್ಕೆ ಮಾದರಿ ಆಗುವಂತೆ ಜನತೆಗೆ ಸಂದೇಶ ನೀಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement