'ಜನರ ನಂಬಿಕೆ ಹುಸಿಗೊಳಿಸುವುದಿಲ್ಲ'
ಚಿಕ್ಕಬಳ್ಳಾಪುರ: ಶಾಸಕನಾಗಿ ಆಯ್ಕೆಯಾಗಿ ಕೇವಲ ಮೂರು ತಿಂಗಳಾಗಿದ್ದರೂ ಕ್ಷೇತ್ರದ 10 ಕೆರೆಗಳ ಪುನಶ್ಚೇತನಕ್ಕೆ 100 ಕೋಟಿ ರು. ಬಿಡುಗಡೆಗೊಳಿಸಲು ಶ್ರಮಿಸಿದ್ದೇನೆ ಎಂದು ಶಾಸಕ ಡಾ. ಕೆ. ಸುಧಾಕರ್ ತಿಳಿಸಿದರು.
ಅವರು ಶುಕ್ರವಾರ ತಾಲೂಕಿನ ಮಂಡಿಕಲ್ ಹಾಗೂ ಕಮ್ಮಗುಟ್ಟಹಳ್ಳಿಯ ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಿಮ್ಮ ಸಮಸ್ಯೆಗೆ ಸದಾ ಸ್ಪಂದಿಸುತ್ತೇನೆ. ಸಮಾಜದ ಕಟ್ಟಕಡೆಯ ಪ್ರಜೆಗೂ ಸರ್ಕಾರದ ಸೌಲಭ್ಯ ತಲುಪುವಂತೆ ಮಾಡಲು ಅವಿರತವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಪ್ರತಿ ಬುಧವಾರ ತಮ್ಮ ಕಚೇರಿಯಲ್ಲಿ ಜನಸ್ಪಂದನ ಸಭೆಯನ್ನು ಹಮ್ಮಿಕೊಳ್ಳುತ್ತಿರುವುದಲ್ಲದೇ ಪ್ರತಿ ತಿಂಗಳು ಹೋಬಳಿ ಮಟ್ಟದಲ್ಲಿ ಕೂಡ ಜನ ಸಂಪರ್ಕ ಸಭೆ ನಡೆಸುತ್ತಿದ್ದೇನೆ. ಖುದ್ದಾಗಿ ಜನರ ಬಳಿ ತೆರಳಿ ದೂರು ಸ್ವೀಕರಿಸುವುದು ಇದರ ಹಿಂದಿನ ಉದ್ದೇಶ. ಅರ್ಜಿಯ ವಿಲೇವಾರಿಗೆ ಕ್ರಮ ಕೈಗೊಂಡು ತಿಂಗಳಿಗೊಮ್ಮೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಪಿ.ಎನ್. ಕೇಶವರೆಡ್ಡಿ, ಉದ್ಯಮಿ ಪಾಪಣ್ಣ, ಮುಖಂಡರಾದ ರವೀಂದ್ರರೆಡ್ಡಿ, ಗೋವಿಂದಸ್ವಾಮಿ, ಕೃಷ್ಣಾರೆಡ್ಡಿ, ಸದಾಶಿವರೆಡ್ಡಿ, ಚನ್ನಕೇಶವರೆಡ್ಡಿ, ಗೋಪಾಲರೆಡ್ಡಿ, ಕೃಷ್ಣಪ್ಪರೆಡ್ಡಿ , ಫಯಾಜ್, ಅಶ್ವತ್ಥನಾರಾಯಣ ರೆಡ್ಡಿ, ಶ್ರೀನಿವಾಸ, ನಾಗರಾಜ, ರಾಮಪ್ಪ, ಗ್ರಾ.ಪಂ. ಅಧ್ಯಕ್ಷ ಮೂರ್ತಿ ಮತ್ತಿತರರು ಹಾಜರಿದ್ದರು.