ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾನಸಿಕ ಸ್ವಾಸ್ಥ್ಯಕ್ಕೆ ಲೈಂಗಿಕ ಶಿಕ್ಷಣ ಅಗತ್ಯ

Rashmi Kasaragodu
Updated On : 8 Sept 2013, 12:48 pm

ಚಿಕ್ಕಬಳ್ಳಾಪುರ: ಕರ್ನಾಟಕವನ್ನು ಮಾದರಿ ಮಾನಸಿಕ ಸ್ವಾಸ್ಥ್ಯ ರಾಜ್ಯವನ್ನಾಗಿಸಲು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲೈಂಗಿಕ ಶಿಕ್ಷಣವನ್ನು ಕೊಡಿಸುವುದು. ರಾಜ್ಯದಲ್ಲಿ ದೊರೆಯುತ್ತಿರುವ ಮಾನಸಿಕ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದಲ್ಲದೇ ಬುದ್ದಿಮಾಂದ್ಯ ಮಕ್ಕಳಿಗಾಗಿ ವಸತಿ ಶಾಲೆ ಪ್ರಾರಂಭಿಸಬೇಕೆನ್ನುವುದು ಸೇರಿದಂತೆ ಅತ್ಯವಶ್ಯಕ ಅಂಶಗಳನ್ನೊಳಗೊಂಡಂತಹ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತಿರುವುದಾಗಿ ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ. ಕೆ.ಎ. ಅಶೋಕ್ ಪೈ ತಿಳಿಸಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನೆಯಂಗಳದಲ್ಲಿಯೇ ಮನೋವೈದ್ಯ ಚಿಕಿತ್ಸೆ ಸಿಗುವಂತಾಗಬೇಕು.
 ಕರ್ನಾಟಕ ರಾಜ್ಯದಲ್ಲಿ ಮಾನಸಿಕ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡಬೇಕೆಂಬ ಉದ್ದೇಶದಿಂದ ತಮ್ಮ ಕಾರ್ಯಪಡೆ ಇಡೀ ರಾಜ್ಯಾದ್ಯಂತ ಸಂಚರಿಸಿ ಮಾನಸಿಕ ಸ್ವಾಸ್ಥ್ಯದ ಕುರಿತು ಅಧ್ಯಯನ ಮಾಡುತ್ತಿದೆ.ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸವನ್ನು ಮುಗಿಸಿದ್ದು ಇದೇ ತಿಂಗಳ 25 ರಂದು ತಾವು ಅಧ್ಯಯನ ನಡೆಸಿ ರೂಪಿಸಿರುವ ಸಮಗ್ರ ವರದಿಯನ್ನು ನೀಡಿ ಕೆಲ ಅಂಶಗಳ ಜಾರಿಗೆಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕಾಗಿದೆ. 1ರಿಂದ 3ನೇ ತರಗತಿಯವರೆಗೆ ಕಿವಿ, ಮೂಗು, ಕಣ್ಣು, 4ರಿಂದ 7ನೇ ತರಗತಿಯವರೆಗೆ ಹೃದಯ, ಶ್ವಾಸಕೋಶದ ಕೆಲಸ ಮತ್ತು ತದ ನಂತರ ಹಂತದ ವಿದ್ಯಾರ್ಥಿಗಳಿಗೆ ದೇಹ ಅಂಗ ರಚನೆ, ಹಾರ್ಮೋನುಗಳ ಕೆಲಸ, ಇದರಿಂದ ಬದಲಾವಣೆ ಸೇರಿದಂತೆ ಪ್ರಮುಖ ವಿಷಯಗಳನ್ನೊಳಗೊಂಡಂತೆ ಲೈಂಗಿಕ ಶಿಕ್ಷಣವನ್ನು ನೀಡಬೇಕಾಗಿದೆ. ಕೆಲವರು ಲೈಂಗಿಕ ಶಿಕ್ಷಣ ನೀಡುವುದರ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕುತೂಹಲ, ಅನುಮಾನಗಳಿಂದ ಹದಿಹರೆಯದವರು ನಾನಾ ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ನಮ್ಮಿಂದ ವೈಜ್‌ಞಾನಿಕವಾಗಿ ತಿಳಿಸುವ ಕೆಲಸವಾಗದ ಕಾರಣ ಅವೈಜ್ಞಾನಿಕ ಅಂಶಗಳ ಮೂಲಕ ದಿಕ್ಕು ತಪ್ಪುತ್ತಿದ್ದಾರೆ ಎಂದ ಅವರು, ಸಮಾಜಶಾಸ್ತ್ರ, ವಿಜ್ಞಾನವನ್ನು ಬೋಧಿಸುವಂತಹ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ನೀಡಿ ವಯಸ್ಸಿಗೆ ತಕ್ಕಂತೆ ವೈಜ್ಞಾನಿಕವಾಗಿ ದೈಹಿಕ ಬದಲಾವಣೆಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತೆ ಮಾಡಬೇಕೆಂದು ಪ್ರತಿಪಾದಿಸಿದರು.
ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ಆತ್ಮಹತ್ಯೆ, ಕೊಲೆ ಸೇರಿದಂತೆ ನಾನಾ ಅಪರಾಧ ಚಟುವಟಿಕೆಗಳಿಗೆ, ಅನಿಷ್ಠ ಪದ್ಧತಿಗಳ ಆಚರಣೆಗೆ ಪ್ರಮುಖವಾಗಿ ಮಾನಸಿಕ ಸಮಸ್ಯೆಗಳೇ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಾನಸಿಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಬೇಕು.
ಈ ಮೂಲಕ ಮಾತ್ರ ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದೆಂದು ತಿಳಿಸಿದರು.
ಪುನಶ್ಚೇತನ ಕೇಂದ್ರ: ಪ್ರತಿ ಜಿಲ್ಲೆಯಲ್ಲಿ ಮಾನಸಿಕ ಸ್ವಾಸ್ಥ್ಯ ಪುನಶ್ಚೇತನ ಕೇಂದ್ರಗಳನ್ನು ಸ್ಥಾಪನೆ ಮಾಡುವುದು ಅಗತ್ಯವಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ 1.80 ಲಕ್ಷ ರು. ಅನುದಾನವನ್ನು ಪ್ರತಿ ಜಿಲ್ಲೆಗೆ ಬಿಡುಗಡೆ ಮಾಡುತ್ತಿದೆ. ತ್ವರಿತವಾಗಿ ಚಿಕ್ಕಬಳ್ಳಾಪುರದಲ್ಲೂ ಸಹ ಪುನಶ್ಚೇತನ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಮಾನಸಿಕ ಅಸ್ವಸ್ಥರಾಗಿ ಚೇತರಿಸಿಕೊಂಡಿರುವವರಲ್ಲಿ ಆತ್ಮವಿಶ್ವಾಸ, ನಂಬಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸದ್ಯದ ಅಂಕಿ ಅಂಶಗಳನ್ನು ನೋಡಿದಾಗ ಬೆಂಗಳೂರು ಆತ್ಮಹತ್ಯೆಗಳ ಎರಡನೇ ನಗರವಾಗಲಿದೆ ಎಂದ ಅವರು, ರಾಜ್ಯದಲ್ಲಿ ಮನೋವೈದ್ಯರ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ಜಿಲ್ಲಾಸ್ಪತ್ರೆಯ ಸರ್ಜನ್ ಮಂಜುಳಾ, ಮನೋವೈದ್ಯ ಕಿಶೋರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement