ಮಾಹಿತಿ ನೀಡುವಲ್ಲಿ ತೊದಲಿದ ಆಹಾರ ನಿರೀಕ್ಷಕ; ಶಾಸಕ ತರಾಟೆಗೆ
ಚಿಕ್ಕಬಳ್ಳಾಪುರ: ಅರ್ಹರಿಗೆ ಪಡಿತರ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಲ್ಲದೇ ಸಮರ್ಪಕವಾಗಿ ಅಂಕಿ- ಅಂಶಗಳನ್ನು ನೀಡಲು ತೊದಲಿದ ಆಹಾರ ನಿರೀಕ್ಷಕ, ಗ್ರಾ.ಪಂ. ಕಾರ್ಯದರ್ಶಿಯನ್ನು ಶಾಸಕ ಡಾ. ಕೆ. ಸುಧಾಕರ್ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ದೊಡ್ಡಪೈಲಗುರ್ಕಿಯಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ, ಕಳೆದ ಎರಡು ವರ್ಷಗಳಿಂದಲೂ ಪಡಿತರ ಚೀಟಿಗೆ ಅರ್ಜಿಯನ್ನು ಹಾಕಿದ್ದರೂ ಸಹ ಸ್ಪಂದಿಸುತ್ತಲೇ ಇಲ್ಲ. ಗುಡಿಸಲಲ್ಲಿ ವಾಸ ಮಾಡುತ್ತಿದ್ದೇನೆ. ನಮಗೆ ಕರೆಂಟ್ ಸಹ ಇಲ್ಲ. ಹೀಗಿರುವಾಗ ಪಡಿತರ ಚೀಟಿಗೆ ವಿದ್ಯುತ್ ಬಲ್ಬ್ ತಂದುಕೊಡಬೇಕೆಂದು ಕೇಳಿದರೆ ನಾನು ಎಲ್ಲಿಂದ ತರುವುದು. ಇಳಿ ವಯಸ್ಸಿನಲ್ಲಿ ಕೆಲಸ ಮಾಡಲು ಕಷ್ಟವಾಗಿದೆ. ನಮ್ಮಂತಹ ಅರ್ಹರಿಗೆ ಪಡಿತರ ಚೀಟಿ ನೀಡುತ್ತಿಲ್ಲ ಎಂದು ಗ್ರಾಮದ ವೃದ್ಧ ಮಹಿಳೆ ಅಳಲು ತೋಡಿಕೊಂಡಾಗ ಕೆಂಡಾಮಂಡಲರಾದ ಶಾಸಕರು, ಕಮಿಷನ್ ಕೊಟ್ಟರೆ ಸಾಕು ಕಾಸಿದ್ದವರಿಗೇ ಯಾವುದೇ ಪರಿಶೀಲನೆ ನಡೆಸದೇ ಪಡಿತರ ಚೀಟಿಯನ್ನು ಕೊಡಲಾಗುತ್ತದೆ. ಆದರೆ, ಬಡವರು ಬಾಯಿ ಬಡಿದುಕೊಂಡರೂ, ಅನೇಕ ಸಲ ಅಲೆದಾಡಿದರೂ ಸಹ ಪಡಿತರ ಚೀಟಿಯನ್ನು ಕೊಡುವುದಿಲ್ಲ. ವಿದ್ಯುತ್ಸ್ಂಪರ್ಕವನ್ನು ಹೊಂದಿರದ ಅಮಾಯಕ ಮಹಿಳೆ ಕರೆಂಟಟ್ಬಿಲ್ಲ ತಂದುಕೊಡಲು ಹೇಗೆ ಸಾಧ್ಯವಾಗುತ್ತದೆ. ಇಂತಹವರಿಗೆ ಪಡಿತರ ಚೀಟಿಯನ್ನು ಕೊಡದೇ ಇನ್ನೆಂತಹವರಿಗೆ ಕೊಡುತ್ತೀರಾ, ನಿವೇಶನ ರಹಿತರನ್ನು ಬಿಟ್ಟು ಸೈಟಿರುವವರಿಗೇನೇ ಉಚಿತವಾಗಿ ನಿವೇಶನಗಳನ್ನು ಕೊಡುವುದಾ ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.
ಆಹಾರ ನಿರೀಕ್ಷಕ, ಗ್ರಾ.ಪಂ. ಕಾರ್ಯದರ್ಶಿಗಳನ್ನು ಪಡಿತರ ಚೀಟಿ ವಿತರಣೆಗೆ ಸಂಬಂಧಪಟ್ಟಂತೆ ಅಂಕಿ ಅಂಶಗಳನ್ನು ಕೋರಿದಾಗ, ಅಧಿಕಾರಿಗಳು ತೊದಲುತ್ತ ಉತ್ತರವನ್ನು ಹೇಳಲಾಗದೇ ನಿಂತುಕೊಂಡರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕರು, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಬೇಕು. ಇಷ್ಟ ಇದ್ದರೆ ಕೆಲಸ ಮಾಡಿ, ಇಲ್ಲದಿದ್ದಲ್ಲಿ ಕೆಲಸದಿಂದ ತೊಲಗಿಸಬೇಕಾಗುತ್ತದೆ ಎಂದ ಅವರು, ಪಡಿತರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಿಸದ ನ್ಯಾಯ ಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಿ, ಇಲ್ಲವೇ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಂಎಲ್ಎ ನೋಡಬೇಕಾ?: ತಮ್ಮ ಬಳಿಗೆ ಬರುತ್ತಿರುವ ವ್ಯಾಪಕ ದೂರುಗಳನ್ನು ನೋಡಿದರೆ ಅಧಿಕಾರಿಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಜನರು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲ. ಚರಂಡಿ ಸ್ವಚ್:್ತೆ, ಬೀದಿ ದೀಪಗಳನ್ನು ಸರಿಪಡಿಸುವಂತಹ ಸಣ್ಣಪುಟ್ಟ ಕೆಲಸಗಳನ್ನೂ ಎಂಎಲ್ಎ ಬಂದು ಮಾಡಬೇಕಾ ಸ್ವಚ್ಛತೆ ಕಾಪಾಡಿ ಎಂದು ನಾವು ಹೇಳಬೇಕಾ ನಿಮಗೆ ಜವಾಬ್ದಾರಿಯಿಲ್ಲವೇ, ಇನ್ನೂ ನೀವು ಏತಕ್ಕೆ ಕೆಲಸದಲ್ಲಿರುವುದು ಎಂದು ಪ್ರಶ್ನಿಸಿದರು.
ಜನರ ಕಷ್ಟಕಾರ್ಪಣ್ಯಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ, ಒಬ್ಬರು ಹೇಳಿದಾಗ ಮಾತ್ರ ಕೆಲಸ ಮಾಡುವುದಲ್ಲ. ಹೋಗಲಿ ಬಡವರನ್ನು ಪೀಡಿಸುತ್ತಾ ಹಣವನ್ನು ವಸೂಲಿ ಮಾಡಿ ಎಷ್ಟು ವರ್ಷ ಬದುಕುತ್ತೀರಾ ಇನ್ನೂರು ಮುನ್ನೂರು ವರ್ಷಗಳೇನಾದರೂ ಇರುತ್ತೀರಾ ಇಲ್ಲವಲ್ಲ, ಇರುವ ದಿನಗಳಲ್ಲಾದರೂ ಜನರಿಗೆ ಕೆಲಸಗಳನ್ನು ಮಾಡಿಕೊಡಿ, ನಿಮ್ಮ ಮನಸ್ಥಿತಿಯನ್ನು ಮೊದಲು ಬದಲಾಯಿಸಿಕೊಂಡು ಜನರ ನೋವಿಗೆ ಸ್ಪಂದಿಸಿ ಪುಣ್ಯವನ್ನು ಸಂಪಾದನೆ ಮಾಡಿ, ಅದು ಬಿಟ್ಟು ಕೆಡುಕು ಬುದ್ದಿಯಲ್ಲಿ ಬದುಕಬೇಡಿ ಎಂದು ಸಲಹೆ ನೀಡಿದರು.
ಬಡಜನರಿಗೆ ಸಾಮಾಜಿಕ ಭದ್ರತೆಗಾಗಿ ಜಾರಿಗೆ ತಂದಿರುವ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನದಡಿ ಪ್ರತಿ ತಿಂಗಳು ಬರುವ ಮಾಸಾಶನದಲ್ಲೂ 50 ರೂ ಕಮಿಷನ್ ಹೊಡೆಯುತ್ತಾರೆ. ಪಡಿತರ ಚೀಟಿ ನೀಡಲು ಬಡವರಿಂದ ಹಣವನ್ನು ಸುಲಿಗೆ ಮಾಡುತ್ತಾರೆ ಎಂದರೆ ಏನು ಹೇಳಬೇಕೆಂದು ವಿಷಾದ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿ, ಪಡಿತರ ಚೀಟಿ ವಿತರಣೆ, ಬಸ್ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದ ಒಟ್ಟು 107 ಅರ್ಜಿಗಳನ್ನು ಸ್ವೀಕರಿಸಲಾಯಿತು. ಹಿಂದಿನ ಕಾರ್ಯಕ್ರಮದಲ್ಲಿ ಸ್ವೀಕಾರವಾಗಿದ್ದ ಹಳೆಯ 58 ಅರ್ಜಿಗಳನ್ನು ಇತ್ಯರ್ಥಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಅನಿತಾ ರವೀಂದ್ರ ರೆಡ್ಡಿ, ತಹಸೀಲ್ದಾರ್ ನಾರಾಯಣಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ನರಸಮ್ಮ ಮುಂತಾದವರು ಭಾಗವಹಿಸಿದ್ದರು.