ಮೂಲಸೌಕರ್ಯ ಕೊರತೆ: ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಚಿಂತಾಮಣಿ: ಇಲ್ಲಿನ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಉಪನ್ಯಾಸಕರ ಕೊರತೆ ಬಗ್ಗೆ ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಆರೋಪಿಸಿ ಶನಿವಾರ ನೂರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಬಾಲಕರ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದ್ದರೂ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿರುವ ಪ್ರಾಂಶುಪಾಲ ಬ್ರಹ್ಮಾಚಾರಿಯನ್ನು ನೂರಾರು ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಮಸ್ಯೆಗಳೇನೇನು?: ಪ್ರಸ್ತುತ ಕಾಲೇಜಿನಲ್ಲಿ 1500 ವಿದ್ಯಾರ್ಥಿಗಳಿದ್ದು, ಒಬ್ಬರೇ ಒಬ್ಬ ಇಂಗ್ಲಿಷ್ ಉಪನ್ಯಾಸಕರಿಲ್ಲ. ಅಲ್ಲದೆ ಉಳಿದ ವಿವಿಧ ವಿಷಯಗಳಿಗೆ ಉಪನ್ಯಾಸಕರ ಕೊರತೆಯಿದೆ. ಕೇವಲ 8 ಕೊಠಡಿಗಳು ಹಾಗೂ 2 ಶೌಚಾಲಯಗಳು ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೇ. ಹೀಗೆ ನೂರಾರು ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಇಕ್ಕಟ್ಟಿಕ್ಕಟ್ಟಾಗಿ ಕುಳಿತುಕೊಳ್ಳಾಬೇಕಾದ ಕೊಠಡಿಗಳಲ್ಲಿ ಸರಿಯಾಗಿ ಕಿಟಕಿಗಳಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಹಲವು ಬಾರಿ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲದ ಕಾರಣ ಶನಿವಾರ ಏಕಾಏಕಿ ಸಾಮೂಹಿಕವಾಗಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಪತ್ರ ನೀಡಲು ವಿದ್ಯಾರ್ಥಿಗಳು ಮುಂದಾದಾಗ ಪ್ರಾಂಶುಪಾಲರು ಸಮರ್ಪಕವಾಗಿ ಉತ್ತರಿಸದೆ ನಿರ್ಲಕ್ಷ್ಯ ತೋರಿದ್ದಾರೆಂದು ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಶಿಕ್ಷಣಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿ ಗ್ರಾಮೀಣ ಪ್ರದೇಶದಿಂದ ಬರುವ ಬಡ ಕಾಲೇಜು ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.