ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ಎಬಿವಿಪಿ ಒತ್ತಾಯ
ಕೋಲಾರ: ರಾಜ್ಯದಲ್ಲಿನ ಎಲ್ಲ ದಲಿತರ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯಗಳನ್ನು ಸುಧಾರಣೆ ಮಾಡಬೇಕೆಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಲಾಯಿತು.
ಬೆಲೆ ಏರಿಕೆಯಿಂದಾಗಿ ತರಕಾರಿಗಳು, ಧಾನ್ಯಗಳು, ಗ್ಯಾಸ್ ಹಾಗೂ ಇತರ ಅಗತ್ಯ ವಸ್ತಗಳ ಬೆಲೆ ಗಗನ ಕುಸುಮಾವಾಗಿವೆ, ಇಂತಹ ಸಂದರ್ಭದಲ್ಲಿ ಈ ಹಿಂದಿನ ಸರ್ಕಾರ ವಿದ್ಯಾರ್ಥಿಗಳಿಗೆ 850ರಿಂದ 1000 ಕ್ಕೆ ತಿಂಗಳ ಊಟದ ಖರ್ಚನ್ನು ನೀಡುವುದಾಗಿ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಈ ಸರ್ಕಾರ ಆ ಯೋಜನೆಯನ್ನು ರದ್ದು ಮಾಡಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದೆ.
ರಾಜ್ಯದಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಲ್ಲಿ ಶೇ. 80 ರಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸುವ ಸ್ಥಿತಿ ಇಲ್ಲ. ಹಾಸ್ಟೆಲ್‌ಗಾಗಿ ಅರ್ಜಿ ಹಾಕಿರುವ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ. 50ರಷ್ಟು ವಿದ್ಯಾರ್ಥಿಗಳಿಗಾದರೂ ಹಾಸ್ಟೆಲ್ ಒದಗಿಸಲು ಅಗತ್ಯವಾದ ಹೊಸ ಹಾಸ್ಟೆಲ್‌ಗಳನ್ನು ತುರ್ತಾಗಿ ಬರುವ ವರ್ಷದಿಂದಲೇ ಪ್ರಾರಂಭಿಸಬೇಕೆಂದು ಮುಖಂಡರು ಆಗ್ರಹಿಸಿದರು.
ರಾಜ್ಯದಲ್ಲಿ ಕೇವಲ ಶೇ. 55ರಷ್ಟು ಹಾಸ್ಟೆಲ್‌ಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಶೇ.45ರಷ್ಟು ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿವೆ.
ಕೋಟ್ಯಂತರ ರು. ಪ್ರತಿ ವರ್ಷ ಬಾಡಿಗೆ ಕಟ್ಟಿ ಖಾಸಗಿಯವರನ್ನು ಉದ್ಧಾರ ಮಾಡಲಾಗುತ್ತಿದೆ. ನೂರಾರು ವರ್ಷ ಅಗತ್ಯವಿರುವ ಹಾಸ್ಟೆಲ್‌ಗಳಾದ ಕಾರಣ ಬರುವ ಐದು ವರ್ಷಗಳ ಯೋಜನೆಯಲ್ಲಿ ರಾಜ್ಯದ ಎಲ್ಲಾ ಹಾಸ್ಟೆಲ್‌ಗಳನ್ನು ಸ್ವಂತ ಕಟ್ಟಡ ನಿರ್ಮಾಣದ ಕ್ರಿಯಾ ಯೋಜನೆಯನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು.
ರಾಜ್ಯದಲ್ಲಿರುವ ಹಾಸ್ಟೆಲ್‌ಗಳ 55 ವಿದ್ಯಾರ್ಥಿಗಳಿಗೆ ಕೊಠಡಿ ಸೌಲಭ್ಯವಿಲ್ಲ. ಹಾಗಾಗಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳುವುದು, ಶೇ. 56. ರಷ್ಟು ವಿದ್ಯಾರ್ಥಿಗಳಿಗೆ ಸ್ನಾನಗೃಹಗಳ ಸೌಲಭ್ಯವಿಲ್ಲ. ಹೆಚ್ಚುವರಿ ಸ್ನಾನಗೃಹಗಳನ್ನು ಪ್ರತಿಯೊಂದು ಹಾಸ್ಟೆಲ್‌ಗಳಲ್ಲಿ ನಿರ್ಮಿಸಬೇಕು. ಉನ್ನತ ಪದವೀಧರರನ್ನು, ಶೈಕ್ಷಣಿಕ ಹಿನ್ನೆಲೆಯುಳ್ಳವರನ್ನೇ ಖಾಯಂ ನಿಲಯಪಾಲಕರನ್ನಾಗಿ ನೇಮಿಸುವುದು. ಹಾಸ್ಟೆಲ್‌ಗಳ ಸಮರ್ಥನಿರ್ವಹಣೆಗಾಗಿಯೇ ಒಂದು ಸ್ವಾಯತ್ತವಾದ ಪ್ರಾಧಿಕಾರವನ್ನು ರಚಿಸಬೇಕು, ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಯ 850 ರು. ಆಹಾರ ಭತ್ಯೆಯನ್ನು ಕನಿಷ್ಠ 1500 ರು. ಹೆಚ್ಚಿಸಬೇಕು ಸೇರಿದಂತೆ ಸುಮಾರು 22 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ರವಾನಿಸುವಂತೆ ಇಲ್ಲಿನ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ನಗರ ಕಾರ್ಯದರ್ಶಿ ಹರೀಶ್, ರಾಮಚಂದ್ರ, ರಾಜೇಶ್, ಬಸಪ್ಪ, ಮುನಿಯಪ್ಪ, ಅಶೋಕ್, ಮುರುಗೇಶ್ ಇದ್ದರು.