ಅಪೌಷ್ಟಿಕತೆ ಬಗ್ಗೆ ಅರಿವು ಮೂಡಿಸಿ
ಮಾಲೂರು: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಪೌಷ್ಟಿಕತೆ ಕೊರತೆಯ ಬಗ್ಗೆ ಗ್ರಾಮೀಣ ಭಾಗದ ಪೋಷಕರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮೇಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಭುವನಹಳ್ಳಿ ಅಬ್ಬಯ್ಯಪ್ಪ ಹೇಳಿದರು.
ತಾಲೂಕಿನ ಚಿಕ್ಕಕುಂತೂರು ಪಂಚಾಯಿತಿ ವ್ಯಾಪ್ತಿಯ ಭುವನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಮಕ್ಕಳಲ್ಲಿ ಅಪೌಷ್ಟಿಕತೆ ಅರಿವು ಕುರಿತ ಜಾದೂ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಬಡತನ ಹಾಗೂ ಅರಿವಿನ ಕೊರತೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಕೊರತೆಯಿಂದ ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸೊಪ್ಪು ಹಾಗೂ ತರಕಾರಿ ಹೆಚ್ಚು ಸೇವಿಸಬೇಕು. ಈ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾದೂ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು,ಪೌಷ್ಟಿಕತೆಯ ಕೊರತೆಯಿಂದ ಅಗುತ್ತಿರುವ ಅನಾಹುತಗಳನ್ನು ಮನಸ್ಸಿಗೆ ನಾಟುವಂತೆ ತೋರಿಸಲಾಗುತ್ತಿದೆ ಎಂದರು. ಜಾದೂಗಾರ ಭದ್ರೇಶ್ ಹಾಗೂ ತಂಡದವರಿಂದ ಅಪೌಷ್ಟಿಕತೆಯಿಂದ ಬರುವ ಕಾಯಿಲೆಗಳ ಬಗ್ಗೆ ಜಾದೂ ಪ್ರದರ್ಶನ ನೀಡಿದರು. ಜೆ. ಶ್ರೀನಿವಾಸ್, ಚೆನ್ನಪ್ಪ, ಶ್ರೀನಿವಾಸ್, ಅಭಿಯಂತರ ಆನಂದ್, ಕಾರ್ಯಕರ್ತೆಯರಾದ ಮಂಜುಳಾ, ಆಶಾ ಕಾರ್ಯಕರ್ತೆ ಕಾಂತಮ್ಮ, ಶಾಲಾ ಸಮಿತಿ ಅಧ್ಯಕ್ಷ ವಿ.ಕೃಷ್ಣಪ್ಪ, ಮಾಜಿ ಅಧ್ಯಕ್ಷ ಮುನಿಶಾಮಿಗೌಡ, ಮಲ್ಲಮ್ಮ ಇದ್ದರು.