ಕೋಲಾರಮ್ಮ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ
ಕ.ಪ್ರ.ವಾರ್ತೆ ಕೋಲಾರ ಸೆ.8
ನಗರಕ್ಕೆ ಕುಡಿಯುವ ನೀರಿನ ಆಸರೆಯಾಗಿರುವ ಕೋಲಾರಮ್ಮ ಕೆರೆಯಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಕೂಡಲೇ ಜಿಲ್ಲಾಡಳಿತ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಮುಖಂಡರು ಒತ್ತಾಯಿಸಿದ್ದಾರೆ.
ಕೋಲಾರಮ್ಮನ ಕೆರೆಯನ್ನು ಉಳಿಸುವಂತೆ ಸುಮಾರು ವರ್ಷಗಳಿಂದ ಹೋರಾಟಗಳು ನಿರಂತರವಾಗಿ ನಡೆಯುತ್ತಲ್ಲೇ ಇವೆ. ಆದರೆ ಯಾವುದೇ ಅಧಿಕಾರಿಗಳು ಗಮನಹರಿಸದೆ ಮೌನವಾಗಿದ್ದಾರೆ. ಈಗಾಗಲೇ ಸುಮಾರು 10ರಿಂದ 15 ಎಕರೆ ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡು ವಾಸದ ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದಾರೆ. ಈ ಮನೆಗಳನ್ನು ಕಟ್ಟಲು ನಗರಸಭೆ ಮತ್ತು ಜಿಲ್ಲಾಡಳಿತದ ಕೆಲವು ಅಧಿಕಾರಿಗಳ ಪ್ರೋತ್ಸಾಹವಿದೆ ಎಂದು ಆರೋಪಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ 4 ಅಂತಸ್ತಿನ ಅನೇಕ ಕಟ್ಟಡಗಳನ್ನು ನಗರಸಭೆ, ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಕೆರೆಯಲ್ಲಿ ಕಟ್ಟಡ ನಿರ್ಮಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಸರ್ಕಾರದ ಆಸ್ತಿ ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿಲ್ಲ, ಜಿಲ್ಲಾ ಆಡಳಿತದ ವೈಫಲ್ಯವೇ ಇದಕ್ಕೆ ಕಾರಣವೆಂದು ತಿಳಿಸಿದ್ದಾರೆ.
ಕೆರೆ ಉಳಿಯಬೇಕಾದರೆ ಜಿಲ್ಲಾಧಿಕಾರಿಗಳು ಕೋಲಾರಮ್ಮನ ಕೆರೆಗೆ ಭೇಟಿ ನೀಡಿ ತಕ್ಷಣ ಬಹುಮಹಡಿಗಳ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಿರುವವರು ಯಾರು, ಕೆರೆ ಜಮೀನನ್ನು ಖಾತೆ ಮಾಡಿಕೊಟ್ಟವರು ಯಾರು, ಎಷ್ಟು ಲಕ್ಷಗಳಿಗೆ ಕೆರೆಯನ್ನು ಮಾರಿದ್ದಾರೆ ಎಂಬುದನ್ನು ಪರಿಶೀಲಿಸಿ ಕೆರೆ ಅಂಗಳದಲ್ಲಿ ತಲೆ ಎತ್ತುತ್ತಿರುವ ಬಹುಮಹಡಿಗಳ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ನಾರಾಯಣಗೌಡ, ಮುಖಂಡರಾದ ಹುಲ್ಕೂರು ಹರಿಕುಮಾರ್, ಮೂರಂಡಹಳ್ಳಿ ಶಿವಾರೆಡ್ಡಿ, ತೇರ್ನಹಳ್ಳಿ ಆಂಜಿನಪ್ಪ, ಕೆಂಬೋಡಿ ಕೃಷ್ಣೇಗೌಡ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.