ನಿರುಪಯುಕ್ತ ಶೌಚಾಲಯ
ಬಾಗೇಪಲ್ಲಿ: ಪುರಸಭೆಯ ವತಿಯಿಂದ ನಿರ್ಮಾಣಗೊಂಡಿರುವ ಸುವರ್ಣ ಕರ್ನಾಟಕ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಮಿಸಿರುವ ಶೌಚಾಲಯ ತೆರೆಯಲು ಹಾಗೂ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪುರಸಭೆಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.
ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಎರಡು ಸಂಕೀರ್ಣಗಳ ಮಧ್ಯದಲ್ಲಿ ನೂತನವಾಗಿ ಶೌಚಾಲಯ ನಿರ್ಮಿಸಿ 2 ವರ್ಷಗಳೇ ಕಳೆದಿವೆ. ಅದರೆ, ಇದುವರೆಗೂ ಶೌಚಾಲಯಗಳು ಬಳಕೆಗೆ ಬಂದಿಲ್ಲ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದು, ಬಯಲು ಮೂತ್ರ ವಿಸರ್ಜನೆಯಿಂದ ಸ್ವಚ್ಛತೆ ಹಾಳಾಗುತ್ತಿದೆ.
ಈ ನಡುವೆ ಸದ್ಯ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿರುವ ಶೌಚಾಲಯವನ್ನು ಈ ಸಂಕೀರ್ಣದಲ್ಲಿ ನಿರ್ಮಿಸಿ 2 ವರ್ಷ ಕಳೆದರೂ ಏಕೆ ಬಳಕೆಗೆ ತಂದಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಈ ಕೊಠಡಿಗಳಲ್ಲಿ ವ್ಯಾಪಾರ- ವಹಿವಾಟು ಪ್ರಾರಂಭವಾಗುತ್ತದೆ. ವ್ಯಾಪಾರ- ವಹಿವಾಟು ಪ್ರಾರಂಭವಾದರೆ ಪುರಸಭೆಗೆ ಸಾವಿರಾರು ರು.ಗಳ ಬಾಡಿಗೆ ರೂಪದಲ್ಲಿ ಆದಾಯ ಬರುತ್ತದೆ. ಆದರೆ, ಇದರ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.