ಶಾಶ್ವತ ನೀರಾವರಿಗಾಗಿ ಪ್ರತಿಷ್ಠೆ ಬದಿಗೊತ್ತಿ ಹೋರಾಡಿ
ಕನ್ನಡ ಪ್ರಭವಾರ್ತೆ, ಮಾಲೂರು, ಸೆ.8
ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗಬೇಕಾದರೆ ಜಿಲ್ಲೆಯ ಎಲ್ಲ ಸಂಘಟನೆಗಳು, ಜನಪ್ರತಿನಿಧಿಗಳು ತಮ್ಮಲ್ಲಿರುವ ಪಕ್ಷಭೇದ, ಸ್ವಯಂ ಪ್ರತಿಷ್ಠೆ ಬದಿಗೊತ್ತಿ ಹೋರಾಡಬೇಕು ಎಂದು ನವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಜಗೋಪಾಲ್ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ, ಕಳೆದ ಎರಡು ದಶಕಗಳ ಮೇಲೆ ಶಾಶ್ವತ ನೀರಾವರಿಗಾಗಿ ಪ್ರತ್ಯೇಕವಾಗಿ ನಡೆಸುತ್ತಿರುವ ಹೋರಾಟವು ವಿಧಾನಸೌಧ ಮುಟ್ಟಲು ವಿಫಲವಾಗುತ್ತಿದೆ.
ಈಗಿನ ಪರಿಸ್ಥಿತಿಯಲ್ಲಿ ಚಿಕ್ಕಬಳಳಾಪುರ- ಕೋಲಾರ ಜಿಲ್ಲೆಗಳಲ್ಲಿರುವ ಸಂಘಟನೆಗಳು ಪ್ರತ್ಯೇಕವಾಗಿ ಹೋರಾಟ ಮಾಡದೆ, ಒಟ್ಟಾಗಿ ರಾಜ್ಯಮಟ್ಟದಲ್ಲಿ ಆಂದೋಲನ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗಿದೆ.
ಹೋರಾಟದ ಜತೆ ಅವಿಭಜಿತ ಜಿಲ್ಲೆಯ ಶಾಸಕರು ಮುಂದಿನ ಅಧಿವೇಶನದಲ್ಲಿ ಶಾಶ್ವತ ನೀರಾವರಿ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಮಾಫಿಯಾಕ್ಕೆ ಕೋಲಾರ ಹಾಗೂ ಮುಳಬಾಗಿಲಿನ ಶಾಸಕರು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದು, ರಾಜ್ಯ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಶಾಸಕರಿಬ್ಬರು ಇಂತಹ ಅಕ್ರಮಗಳಿಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದರು.
ಕೆಜಿಎಫ್ ಚಿನ್ನದ ಗಣಿಯನ್ನು ಪುನರಾರಂಭಿಸುವಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಸಲ್ಲ ಎಂದ ರಾಜಗೋಪಾಲ್ ಗೌಡ ರವರು ಅದಷ್ಟು ಬೇಗ ಜಾಗತಿಕ ಟೆಂಡರ್ ಕರೆಯುವ ಜತೆಗೆ ಖಾಲಿಯಾಗಿರುವ ಮನೆಗಳನ್ನು ಮತ್ತೆ ಅದೇ ನೌಕರರ ಕುಟುಂಬಕ್ಕೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎಂದರು.
ಜಿಲ್ಲಾಧ್ಯಕ್ಷ ಚಿನ್ನಿ ವೆಂಕಟೇಶ್, ಕಾರ್ಯದರ್ಶಿ ದೇವರಾಜ್, ತಾ.ಅಧ್ಯಕ್ಷ ಎಲ್.ಪ್ರಕಾಶ್, ಕಾರ್ಯದರ್ಶಿ ಎಂ.ಆರ್.ವಾಸು ಇದ್ದರು.