ಸದಾಶಿವಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ
ಕ.ಪ್ರ. ವಾರ್ತೆ, ಬಂಗಾರಪೇಟೆ, ಸೆ.8
ಪಟ್ಟಣದ ಅಕ್ಕಚಮ್ಮ ಕಲ್ಯಾಣಮಂಟಪ ಖಾಸಗಿ ಆಸ್ತಿ ಎಂಬುದನ್ನು ಸಾಬೀತುಪಡಿಸಿದರೆ ಬಹಿರಂಗವಾಗಿ ಕ್ಷಮೆ ಕೋರುವೆ ಇಲ್ಲದಿದ್ದರೆ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎ.ಎನ್. ಸದಾಶಿವಯ್ಯ ರಾಜಿನಾಮೆ ನೀಡಲಿ ಎಂದು ಮಹಾಂತ ಬೆಳ್ಳಾವಿ ಮಠದ ಶಿವಾಚಾರ್ಯ ಸ್ವಾಮೀಜಿ ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿಗೆ ಅಕ್ಕಚಮ್ಮ ಕಲ್ಯಾಣ ಮಂಟಪ ಖಾಸಗಿ ಟ್ರಸ್ಟ್ ವತಿಯಿಂದ ನಡೆಯುತ್ತಿಲ್ಲ. ಇದು ಸಮಾಜದ ಆಸ್ತಿ. ಇದರಲ್ಲಿ ಕಳೆದ 8 ವರ್ಷಗಳಿಂದ ಲೆಕ್ಕ ಪಕ್ಕಾ ಇಡದೆ ಅವ್ಯವಹಾರ ನಡೆಸಿದ್ದರಿಂದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಆದೇಶದ ಮೇರೆಗೆ ನಾವು ಬಂದು ಸಮಸ್ಯೆ ತಿಳಿಗೊಳಿಸಲು ಮುಂದಾಗಿದ್ದೇವೆ. ಎ.ಎನ್. ಸದಾಶಿವಯ್ಯ ಅವರು ನಾವು ಕರೆದಿದ್ದ ಯಾವುದೇ ಸಭೆಗಳಿಗೆ ಬಾರದೆ ಪಲಾಯನ ಮಾಡಿದ್ದರಿಂದ ವಿಧಿಯಿಲ್ಲದೆ ಕಲ್ಯಾಣಮಂಟಪಕ್ಕೆ ಬೀಗ ಹಾಕಿದೇವು ಎಂದರು.
ಸದಾಶಿವಯ್ಯ ಅವರು ಸ್ವಾಮೀಜಿಗಳು ಹಣ ಪಡೆದು ಕಲ್ಯಾಣಮಂಟಪಕ್ಕೆ ಬೀಗ ಹಾಕಿದ್ದಾರೆಂದು ಆರೋಪ ಮಾಡುವ ಮೂಲಕ ಸ್ವಾಮಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದು ಇಡೀ ಸಮಾಜವೇ ಸ್ವಾಮಿಗಳ ಬಗ್ಗೆ ಇರುವ ಗೌರವಕ್ಕೆ ಕುಂದು ತರುವಂತಾಗಿದೆ. ಸ್ವಾಮಿಗಳ ಬಗ್ಗೆ ಹಗುರವಾಗಿ ಮಾತನಾಡಿರುವ ಸದಾಶಿವಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಕಲ್ಯಾಣಮಂಟಪದ ನಿವೇಶನ ಖರೀದಿಸಲು ಸಮಾಜದ ಬಂಧುಗಳಿಂದ ದೇಣಿಗೆ ಪಡೆದಿರುವುದಕ್ಕೆ ದಾಖಲೆ ತೋರಿಸಿದರು. 2005ರಿಂದ 2013 ವರೆಗೂ ಟ್ರಸ್ಟ್ ಹೆಸರಿನ ಬ್ಯಾಂಕಿನ ಖಾತೆಗೆ ಜಮಾವಾಗಬೇಕಿದ್ದ ಹಣವನ್ನು ಸದಾಶಿವಯ್ಯ ಅವರು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಕೊಂಡಿರುವುದಕ್ಕೂ ದಾಖಲೆ ಪ್ರದರ್ಶಿಸಿದರು.
ಈ ಅವಧಿಯಲ್ಲಿ ಸುಮಾರು 60 ಲಕ್ಷ ಅವ್ಯವಹಾರ ನಡೆದಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. 15 ದಿನದೊಳಗೆ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪಅವರು ಎಲ್ಲಾ ಗೊಂದಲ ನಿವಾರಿಸುವುದಾಗಿ ತಿಳಿಸಿದ್ದಾರೆ ಎಂದರು.
ಸ್ವಾಮಿಗಳು ಎಂದಿಗೂ ಸಮಾಜ ಒಡೆಯುವ ಕೆಲಸಗಳನ್ನು ಮಾಡುವುದಿಲ್ಲ. ಒಡೆದಿರುವ ಮನಸ್ಸುಗಳನ್ನು ಒಗ್ಗೂಡಿಸುವ ಸಲುವಾಗಿ ಇಲ್ಲಿಗೆ ಬಂದೆವು. ಇದರ ಹಿಂದೆ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಐತಾಂಡಹಳ್ಳಿ ನೀಲಕಂಠ ಸ್ವಾಮೀಜಿ, ನಾಗಲಾಪುರ ಮಠದ ತೇಜೋಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು.