'ಸನ್ಮಾನಿತ ಅಧಿಕಾರಿಗಳ ಸೇವೆ ರಾಜ್ಯಕ್ಕೆ ವಿಸ್ತರಿಸಲಿ'
ಕ.ಪ್ರ.ವಾರ್ತೆ ಚಿಂತಾಮಣಿ ಸೆ.8
ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸನ್ಮಾನಿತರಾದ ಅಧಿಕಾರಿಗಳ ಕಾರ್ಯ ಚಟುವಟಿಕೆಗಳು ರಾಜ್ಯ ವ್ಯಾಪ್ತಿಗೂ ವಿಸ್ತರಿಸಲಿ ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಪಟ್ಟಣದಲ್ಲಿನ ವಿಜಯಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕ.ಸಾ.ಪ ಹಾಗೂ ವಿವಿಧ ಸಂಘ ಸಂಸ್ಥೆಗಳ ಮತ್ತು ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ವರ್ಗಾವಣೆಗೊಂಡ ಐ.ಪಿ.ಎಸ್ ಅಧಿಕಾರಿ ರಮೇಶ್ ಬಾನೂತ್, ತಾಲೂಕು ದಂಡಾಧಿಕಾರಿ ಎಂ.ಎನ್.ಮಂಜುನಾಥ್, ನಗರಸಭೆ ಆಯುಕ್ತ ಡಾ.ರಾಮೇಗೌಡ ಈ ಮೂವರು ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜನಸಾಮಾನ್ಯರ ಆಸ್ತಿ ಪಾಸ್ತಿ ರಕ್ಷಣೆ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ನಿರ್ನಾಮ ಮಾಡಲು ಪೊಲೀಸ್ ಅಧಿಕಾರಿ ರಮೇಶ್ ಬಾನೂತ್ ಸೇವೆಯ ಬಗ್ಗೆ ಸಭೆಯಲ್ಲಿ ವಿವರಿಸಿದರು. ನಗರವನ್ನು ಸ್ವಚ್ಛವಾಗಿರಿಸಲು, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಆಯುಕ್ತ ರಾಮೇಗೌಡ ಪ್ರಾಮಾಣಿಕ ಸೇವೆಯನ್ನು ಮಾಡಿದರು. ತಾಲೂಕು ದಂಡಾಧಿಕಾರಿಗಳು ಕಳೆದ 2 ವರ್ಷಗಳಿಂದ ಜನರಿಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿರುವುದು ಜನರ ಮೆಚ್ಚಿಗೆ ಪಾತ್ರರಾಗಿದ್ದಾರೆಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಯ ಮುಖಂಡರಾದ ಕವಾಲಿ ವೆಂಕಟರವಣಪ್ಪ, ರಾಮಕೃಷ್ಣಾರೆಡ್ಡಿ, ನರಸಪ್ಪ, ವೆಂಕಟರವಣಪ್ಪ, ಸೇರಿದಂತೆ ವಿವಿಧ ಮುಖಂಡರು ದಕ್ಷ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅವರವರ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕಾರ್ಯನಿರತ ಪತ್ರಕರ್ತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಜೈ ಕರ್ನಾಟಕ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ವಾಲ್ಮೀಕಿ ಸಂಘ, ನಗರ ಪೌರ ಕಾರ್ಮಿಕರ ಸಂಘ ಸೇರಿದಂತೆ ಇನ್ನೂ ಹಲವು ಸಂಘ ಸಂಸ್ಥೆಗಳು ವರ್ಗಾವಣೆಗೊಂಡ ಅಧಿಕಾರಿಗಳನ್ನು ಆತ್ಮೀಯವಾಗಿ ಹೂ ಮಾಲೆ ಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಎನ್.ನಟರಾಜ್, ಕಸಾಪ ಅಧ್ಯಕ್ಷ ಎ ಎಸ್ ನಾಗರಾಜ್, ಕರವೇ ತಾಲೂಕು ಅಧ್ಯಕ್ಷ ಅಂಬರೀಶ್, ಜೈ ಕರ್ನಾಟಕ ಸಂಘಟನೆ ಬುಲೆಟ್ ರಮೇಶ್, ವಕೀಲ ಈಶ್ವರ ಗೌಡ, ಡಿಎಸ್ಎಸ್ ಮುಖಂಡರಾದ ಲಕ್ಷ್ಮೀನಾರಾಯಣ, ನಗರಸಭೆ ಆರೋಗ್ಯ ಅಧಿಕಾರಿಗಳಾದ ಸಿ.ಕೆ.ಬಾಬು, ಪ್ರದೀಪ್, ಆರುತಿ ಸೇರಿದಂತೆ ಇನ್ನೂ ಹಲವಾರು ಸಂಘಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.