ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯ: ವೆಂಕಟಸ್ವಾಮಿ
ಕನ್ನಡಪ್ರಭ ವಾರ್ತೆ, ಕೋಲಾರ, ಸೆ.8
ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹನೀಯವಾಗಿದ್ದು, ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಎಸ್.ವೆಂಕಟಸ್ವಾಮಿ ಅವರು ಹೇಳಿದರು.
ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಪಟು ಮೂರಾಂಡಹಳ್ಳಿ ವಿ.ಮಾರಪ್ಪ ಮತ್ತು 4 ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜೀವನ್ ಸೌಭಾಗ್ಯ ಅವರನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸಿದರೆ ದೇಶದ ಅಭಿವೃದ್ಧಿ ಹೆಚ್ಚುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಜೆ.ಜಿ. ನಾಗರಾಜ್ ಮಾತನಾಡಿ, ಜಗತ್ತಿನ ಮಾರ್ಗದರ್ಶಕರು ತಾಯಿ- ತಂದೆಯಾಗಿದ್ದು, ಇದರಲ್ಲಿ ತಾಯಿ ಹಾಗೂ ಗುರುವಿಗೆ ಪ್ರಥಮ ಸ್ಥಾನವಿದೆ ಎಂದರು.
ಗುರು ಹಾಗೂ ಶಿಷ್ಯರ ಸಂಬಂಧ ಚಿರಕಾಲವಾಗಿರಿತ್ತದೆ ಗುರು ಶಿಕ್ಷಣಕ್ಕೆ ಮಾತ್ರವಲ್ಲದೆ ಬದುಕಿಗೂ ರೂವಾರಿಯಾಗಬೇಕು. ಮಾನವೀಯ ಸಂಬಂಧಗಳನ್ನು ಹೆಚ್ಚೆಚ್ಚು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಕ ವಿಚಾರ ಮಾಡಬೇಕಿದೆ. ಪಾಶ್ಚಾತ್ಯ ಕಲೆಗಳಿಗೆ ಮಾರುಹೋಗದೆ ದೇಸಿತನ ಬೆಳೆಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಕಲಾವಿದ ಜ್ಯೂನಿಯರ್ ರಾಜ್ಕುಮಾರ್ ಅವರಿಂದ, ಡಾ. ರಾಜ್ ಅಭಿನಯದ ಹಾಡುಗಳಿಗೆ ಅದೇ ರೀತಿಯಲ್ಲಿ ನಟಿಸಿ ನರ್ತಿಸುವ ಮೂಲಕ ವಿದ್ಯಾರ್ಥಿಗಳಿಗೆ ರಸದೌತಣ ನೀಡಿದರು. ವಿದ್ಯಾರ್ಥಿ ಮುಖಂಡ ಹೂಹಳ್ಳಿ ನಾಗರಾಜ್, ಎಬಿವಿಪಿ ಮುರಳಿ ಈ ಸಂದರ್ಭದಲ್ಲಿ ಶಿಕ್ಷಕರಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಡಾ. ರುಕ್ಮಿಣಿ ಹಾಗೂ ಉಪನ್ಯಾಸಕರು ಹಾಜರಿದ್ದರು. ಕೆ.ಎನ್. ವಿಮಲ, ಸವಿತ ನಿರೂಪಿಸಿ, ಎನ್. ಮುನಿಕೃಷ್ಣಪ್ಪ ಸ್ವಾಗತಿಸಿ, ನಂದೀಶ್ ವಂದಿಸಿದರು.