ಆಯಿಲ್ ಮಾಫಿಯಾ ಮೇಲೆ ದಾಳಿ: 6 ಮಂದಿ ಬಂಧನ, 2 ಟ್ಯಾಂಕರ್ ವಶ
ಕ.ಪ್ರ. ವಾರ್ತೆ ಆಲೂರು ಸೆ.10
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ನೇತೃತ್ವದ ತಂಡ ಸೋಮವಾರ ರಾತ್ರಿ ತಾಲೂಕಿನ ನಾನಾ ಕಡೆಗಳಲ್ಲಿ ಆಯಿಲ್ಮಾಫಿಯಾ ನಡೆಸುತ್ತಿದ್ದ ಸ್ಥಳಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈ ಸಂಬಂಧ 6 ಮಂದಿಯನ್ನು ಬಂಧಿಸಿ, 2 ಟ್ಯಾಂಕರ್ನ್ನು ವಶಪಡಿಸಿ ಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ರ ನೇರಲೆಕೆರೆ ಕೂಡಿಗೆ ಬಳಿ ಇರುವ ಡಾಬಾ ಹಾಗೂ ಹೆದ್ದುರ್ಗ-ಕೂಡಿಗೆ ಅಡ್ಡೆಗಳ ಮೇಲೆ ಎಸ್ಪಿ ತಂಡ ದಾಳಿ ನಡೆಸಿ ಹೆದ್ದುರ್ಗ-ಕೂಡಿಗೆಯ ಖಾಸಿಂ, ನೇರಲೆಕೆರೆ-ಕೂಡಿಗೆ ಮಂಗಳೂರು ಡಾಬಾದ ಜಾಫರ್ ಅಲಿಯಾಸ್ ಪ್ರಶಾಂತ್ ಎಂಬುವರು ಅಕ್ರಮವಾಗಿ ಟ್ಯಾಂಕರ್ಗಳಲ್ಲಿ ಡೀಸೆಲ್ ಇಳಿಸುತ್ತಿದ್ದಾಗ ದಾಳಿ ನಡೆಸಿದರು. ಈ ವೇಳೆ ಟ್ಯಾಂಕರ್ ಚಾಲಕ ಮತ್ತು ನಿರ್ವಾಹಕರನ್ನು ಸೇರಿ 6 ಮಂದಿಯನ್ನು ಬಂಧಿಸಿದ್ದು, ಪಟ್ಟಣದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂತರ ಟ್ಯಾಂಕರ್ನಿಂದ ಡೀಸೆಲ್, ಪೆಟ್ರೋಲ್ನ್ನು ಇಳಿಸಿ ಬಿಡಿಯಾಗಿ ಮಾರಾಟ ಮಾಡುತ್ತಿದ್ದವರ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಕಡೆಗಳಲ್ಲಿ ಅಕ್ರಮವಾಗಿ ಡೀಸೆಲ್
ಮಾಡುತ್ತಿದ್ದ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು.
ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ದಂದೆಗೆ ಕಡಿವಾಣ ಹಾಕಲು ಕಾರ್ಯೋನ್ಮುಖವಾಗಿರುವ ಜಿಲ್ಲಾ ಎಸ್ಪಿ ಕಾರ್ಯವೈಖರಿಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಕ್ರಮ ದಂದೆಕೋರರನ್ನು ಬಿಡಿಸಲು ಹಲವರು ಒತ್ತಡ ಹಾಕಿದರೂ ಎಸ್ಪಿ ಬಗ್ಗದೆ ಕಾರ್ಯದಕ್ಷತೆ ತೋರಿರುವುದರ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಪಟ್ಟಣದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ನೀಡಿದ ದೂರುಗಳನ್ನು ಗಂಭೀರವಾಗಿ ಪರಿಗಣಿಸುವ ಅವರು, ಪಟ್ಟಣದಲ್ಲಿ ಸಂತೆಯ ಅವ್ಯವಸ್ಥೆ ಸರಿಪಡಿಸಿ ಸಾರಿಗೆ ವ್ಯವಸ್ಥೆಗೆ ಉಂಟಾಗುತ್ತಿದ್ದ ಅಡಚಣೆಯನ್ನು ಸರಿಪಡಿಸುವುದರ ಜೊತೆಗೆ ಅಕ್ರಮ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವುದು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.