'ಕಣ್ಣು ದಾನ; ಅಂಧರ ಬಾಳಿಗೆ ಬೆಳಕು'
ಹೊಳೆನರಸೀಪುರ: ಕಣ್ಣುಗಳನ್ನು ಉದಾರವಾಗಿ ದಾನ ಮಾಡುವ ಮೂಲಕ ಕತ್ತಲು ತುಂಬಿರುವ ಅಂಧರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ನಾವು ನೇತ್ರದಾನ ಔದಾರ್ಯತೆ ಮೆರೆಯೋಣ ಎಂದು ಲಯನ್ಸ್ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ.ಕೆ.ಶ್ರೀನಿವಾಸಮೂರ್ತಿ ಕರೆ ನೀಡಿದರು.
28ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆಯ ಅಂಗವಾಗಿ ಲಯನ್ಸ್ ಹಾಗೂ ತಾಲೂಕು ವಕೀಲರ ಸಂಘವು ಹಮ್ಮಿಕೊಂಡಿದ್ದ ನೇತ್ರದಾನ ಅರಿವು ಅಂಗವಾಗಿ ಇಲ್ಲಿನ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೇತ್ರದಾನ ಮಹತ್ವದ ಕುರಿತಂತೆ ಅವರು ಮಾತನಾಡಿದರು.
ಭಾರತದಲ್ಲಿ ಸುಮಾರು 15ಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದು, ಪ್ರತಿ ವರ್ಷವೂ ಸುಮಾರು 40ರಿಂದ 50ಸಾವಿರ ಜನರು ವಿವಿಧ ಕಾರಣಗಳಿಂದಾಗಿ ಅಂಧತ್ವಕ್ಕೆ ಗುರಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಇಂತಹ ಪರಿಸ್ಥಿತಿಯಲ್ಲಿ ಮೃತ ದಾನಿಗಳಿಂದ ಸ್ವಯಂಪ್ರೇರಿತವಾಗಿ ದೊರೆಯುತ್ತಿರುವ ಕಣ್ಣುಗಳ ಸಂಖ್ಯೆ ಕೇವಲ 25ಸಾವಿರ ಮಾತ್ರ ಎಂದು ವಿಷಾದಿಸಿದ ಡಾ.ಕೆ.ಶ್ರೀನಿವಾಸಮೂರ್ತಿ ಜಿಲ್ಲೆಯಲ್ಲಿಯೂ ಸುಮಾರು 250ರಿಂದ 300ಜನರು ವಿವಿಧ ಅಂಧತ್ವಕ್ಕೆ ಒಳಗಾಗಿ ಈ ಜಗತ್ತನ್ನು ನೋಡುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಬಾಷಂ ಮಾತನಾಡಿ, ಬಾಲ್ಯದಲ್ಲಿಯೇ ಆಟದ ಸಮಯದಲ್ಲಿ ತಮ್ಮ ಒಂದು ಕಣ್ಣನ್ನು ಕಳೆದುಕೊಂಡು ಇಂದಿನವರೆವಿಗೂ ಒಂದು ಕಣ್ಣಿನಿಂದಲೇ ತಮ್ಮ ಜೀವನವನ್ನು ದೂಡುತ್ತಿರುವ ತಮಗೆ ಕಣ್ಣಿನ ಮಹತ್ವ ಅರಿವಾಗಿದ್ದು, ತಮ್ಮ ಸಾವಿನ ನಂತರ ತಮಗಿರುವ ಒಂದು ಕಣ್ಣಾದರೂ ಇನ್ನೊಬ್ಬರ ಬಾಳಿಗೆ ಬೆಳಕಾಗಲು ತಮ್ಮ ಕಣ್ಣನ್ನು ದಾನಮಾಡುವುದಾಗಿ ಸಮಾರಂಭದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.
ಲಯನ್ಸ್ ಅಧ್ಯಕ್ಷ ಎಚ್.ಆರ್.ಮುಕುಂದೇಗೌಡ ಮಾತನಾಡಿ, ಎಲ್ಲರಲ್ಲೂ ನೇತ್ರದಾನದ ಬಗ್ಗೆ ಪ್ರಜ್ಞಾವಂತಿಕೆ ಮೂಡಿಸಿ ನೇತ್ರದಾನದ ಕುರಿತಂತೆ ಸಮಾಜಕ್ಕೆ ಅರಿವು ಮೂಡಿಸುವುದು ಲಯನ್ಸ್ ಗುರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಡಿ.ಕಂಬೇಗೌಡ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಕಾಮಾಕ್ಷಿ ಇದ್ದರು. ಲಯನ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ವಕೀಲರು ನ್ಯಾಯಾಲಯದಿಂದ ಗಾಂಧಿವೃತ್ತದವರೆಗೂ ಮೆರವಣಿಗೆಯಲ್ಲಿ ತೆರಳಿ ನೇತ್ರದಾನದ ಕುರಿತಂತೆ ಅರಿವು ಮೂಡಿಸಿದರು. ಎಂ.ಎನ್.ಜೈಪ್ರಕಾಶ್ ನಿರೂಪಿಸಿದರು. ಆರ್.ಡಿ.ರವೀಶ್ ಸ್ವಾಗತಿಸಿದರು. ಬಿ.ಆರ್.ಪುರುಷೋತ್ತಮ್ ವಂದಿಸಿದರು.