ಕೇಂದ್ರ ಸ್ಥಾನದಲ್ಲೇ ಅಧಿಕಾರಿಗಳ ಬಿಡಾರ ಕಡ್ಡಾಯ
ಕ.ಪ್ರ. ವಾರ್ತೆ ಕೋಲಾರ ಸೆ.10
ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ಇದ್ದು ಜನರ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದರ ಜೊತೆಗೆ ಡೆಂಘಿ, ಚಿಕುನ್ಗುನ್ಯಾ, ಕರಳುಬೇನೆ ಇತ್ಯಾದಿ ಮಾರಕ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಚಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅಧಿಕಾರಿಗಳು ಪ್ರತಿ ತಿಂಗಳು ಆರ್ಥಿಕ ಮತ್ತು ಭೌತಿಕ ಪ್ರಗತಿಗೆ ಸಂಬಂಧಿಸಿದ ಅಂಕಿ ಅಂಶಗಳಲ್ಲಿ ತಿಳಿಸುವುದು ಒಂದೇ ಗುರಿಯಾಗಬಾರದು. ಇದರ ಜೊತೆಗೆ ಸಾರ್ವಜನಿಕರಿಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಗಮನ ಹರಿಸಬೇಕೆಂದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿ.ಸಿ. ಟಿ.ವಿ ಅಳವಡಿಸುತ್ತಿದ್ದು ಅಧಿಕಾರಿಗಳ ವಾಹನಗಳು ಬೆಂಗಳೂರಿಗೆ ಹೋಗಿ ಬರುವುದು ಅದರಲ್ಲಿ ಸೆರೆ ಹಿಡಿಯಲಾಗುತ್ತದೆ, ಆಗ ಎಲ್ಲಾ ಅಧಿಕಾರಿಗಳ ಮಾಹಿತಿ ಜಿಲ್ಲಾಡಳಿತಕ್ಕೆ ಗೊತ್ತಾಗುವುದರಿಂದ ಇನ್ನು ಮುಂದೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಮಾಡಬೇಕೆಂದು ತಾಕೀತು ಮಾಡಿದರು.
46 ಟ್ಯಾಂಕರ್ಗಳಲ್ಲಿ ನೀರು: ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ದೇವರಾಜ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ 46 ಟ್ಯಾಂಕರ್ಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಹಾಗೂ 47 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪಡೆಯಲಾಗುತ್ತಿದೆ ಎಂದು ವಿವರಿಸಿದರು.
ಇನ್ನು ಮುಂದೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್ಗಳು, ತಾ.ಪಂ ಇಒಗಳು,ಗ್ರಾ.ಪಂ ಡಿ.ಓ.ಗಳ ಸಮಿತಿಗಳನ್ನು ರಚಿಸಿ ಯಾವ ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಆಗುತ್ತಿದೆ ಎಂಬ ವಿವರವನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೂ ಹಾಗೂ ನನಗೂ ವರದಿ ಕಳುಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸೆಪ್ಟೆಂಬರ್ನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ರಾಗಿ, ಅವರೆ, ಅಲಸಂದೆ, ಮುಸುಕಿನ ಜೋಳದ ಬೆಳೆಗಳು ಚೇತರಿಸಿಕೊಂಡಿದೆ. ಈವರೆವಿಗೂ ಶೇ.74ರಷ್ಟು ಬಿತ್ತನೆಯಾಗಿದ್ದು ಉಳಿದ 26 ರಷ್ಟು ಪ್ರದೇಶದಲ್ಲಿ ಹುರುಳಿ ಇತ್ಯಾದಿಗಳನ್ನು ಬಿತ್ತನೆ ಮಾಡಬಹುದೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಫೈಯಾಜ್ ಖಾನ್ ಮಾತನಾಡಿ ಜಿಲ್ಲೆಯಲ್ಲಿ 88 ಡೆಂಘಿ, 56 ಚಿಕೂನ್ಗುನ್ಯ ಪ್ರಕರಣಗಳು ಪತ್ತೆಯಾಗಿದ್ದು ಯಾವುದೇ ಸಾವು ಆಗಿಲ್ಲವೆಂದು ತಿಳಿಸಿದರು. ಮುಂಜಾಗ್ರತೆ ಕ್ರಮವಾಗಿ 432 ಗ್ರಾಮಗಳಿಗೂ 35600 ಮನೆಗಳಿಗೆ ಭೇಟಿ ನೀಡಿ ತಿಳುವಳಿಕೆ ಮೂಡಿಸಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡದ ವೈದ್ಯರ ಗ್ರಾಮೀಣ ಭತ್ಯೆಯನ್ನು ಕಡಿತಗೊಳಿಸಬೇಕೆಂದು ಉಸ್ತುವಾರಿ ಕಾರ್ಯದರ್ಶಿ ಡಿಹೆಚ್ಒ ಅವರಿಗೆ ತಿಳಿಸಿದರಲ್ಲದೆ, ಯಾವುದೇ ಕಾಯಿಲೆಗಳ ಬಗ್ಗೆ ಸರ್ಕಾರಕ್ಕೆ ಸಕಾಲಕ್ಕೆ ವರದಿ ಮಾಡಬೇಕೆಂದು ತಿಳಿಸಿದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗುತ್ತಿದೆ. ಮೇವುಗೆ ತೊಂದರೆಯಾಗಿಲ್ಲವೆಂದು ತಿಳಿಸಿದರು.
ಹಿಂದುಳಿದ ಇಲಾಖೆಯ ಅಧಿಕಾರಿ ರಂಗಯ್ಯ ಮಾತನಾಡಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಗ ಇನ್ನು 40 ವಸತಿ ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ ಎಂದು ಹೇಳಿದರು.
ಮೊಕದ್ದಮೆಗೆ ಸಲಹೆ: ಅಕ್ರಮ ಮರಳು ಸಾಗಾಣಿಕೆ ವ್ಯಾಪಕವಾಗಿ ನಡೆಯುತ್ತಿದ್ದು ಮರಳು ಲಾರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಬೇಕೆಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ಬೇಕಾಗಿರುವ ಬಿತ್ತನೆ ಬೀಜ, ರಸಗೊಬ್ಬರ, ಜನರಿಗೆ ಶುದ್ಧ ಕುಡಿಯುವ ನೀರು, ಬೆಸ್ಕಾಂನಿಂದ ನಿರಂತರ ವಿದ್ಯುತ್ ಪೂರೈಕೆ, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳು, ಆರೋಗ್ಯ ಇಲಾಖೆಯಿಂದ ಮಾರಣಾಂತಿಕ ರೋಗಗಳ ಬಗ್ಗೆ ಅರಿವು ಮೂಡಿಸುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಮಕ್ಕಳ ಪೌಷ್ಟಿಕತೆ ಕಾಪಾಡುವುದು ಆದ್ಯತೆ ಮೇರೆಗೆ ಜಿಲ್ಲೆಯಲ್ಲಿ ನಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲಾಧಿಕಾರಿ ಡಿ.ಕೆ. ರವಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಜುಲ್ಫಿಖಾರ್ ಉಲ್ಲಾ, ಉಪ ಕಾರ್ಯದರ್ಶಿ ಬದನೂರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.