ಗಜಮುಖನೇ ಗಣಪತಿಯೇ ನಿನಗೆ ವಂದನೆ...
ವಿಶೇಷ ಪೂಜೆ
ಕ.ಪ್ರ. ವಾರ್ತೆ, ಕೋಲಾರ, ಸೆ.10
ನಗರದಲ್ಲಿ ಸಿದ್ಧಿ ವಿನಾಯಕನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ವಿವಿಧ ದೇವಾಲಯಗಳಲ್ಲಿ ಮತ್ತು ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ನೆರವೇರಿಸಲಾಯಿತು.
ಈ ಬಾರಿ ಕಠಾರಿ ಪಾಳ್ಯದ ಶ್ರೀ ವಿಶ್ವೇಶ್ವರಯ್ಯ ಗಣೇಶೋತ್ಸವ ಸಮಿತಿಯವರು ಗಣೇಶ ಹಬ್ಬ ಆಚರಿಸದಿರುವುದಕ್ಕೆ ಸಾರ್ವಜನಿಕರು ನಿರಾಸೆ ಹೊಂದಿದ್ದರು. ನಗರದ ಮಹತ್ಮಾಗಾಂಧಿ ಉದ್ಯಾನವನ ಬಳಿ ಲೋಕಮಾನ್ಯ ತಿಲಕ್ಗ್ಣೇಶ ವಿಸರ್ಜನಾ ಸಮಿತಿಯಿಂದ ಏರ್ಪಡಿಸಿದ್ದ ಗಣೇಶೋತ್ಸವ ಅದ್ಧೂರಿಯಾಗಿತ್ತು. ಸೋಮವಾರ ರಾತ್ರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯ ನಡೆಯಿತು.
ಈ ಬಾರಿ ಆಂಜನೇಯನು ತನ್ನ ಹೆಗಲ ಮೇಲೆ ಗಣೇಶನನ್ನು ಹೊತ್ತಿರುವ ದೃಶ್ಯ ರಮಣಿಯವಾಗಿತ್ತು. ಜೊತೆಗೆ ಗಣೇಶನ ವೇಷಧಾರಿಯೊಬ್ಬ ಮಕ್ಕಳನ್ನು ರಂಜಿಸುವ ಮೂಲಕ ಹಬ್ಬಕ್ಕೆ ಕಳೆ ತಂದುಕೊಟ್ಟಿದ್ದು ವಿಶೇಷವಾಗಿತ್ತು.
ನಗರದ ಜಿಲ್ಲಾ ಆಸ್ಪತ್ರೆ ಹಾಗೂ ಪ್ರವಾಸಿ ಮಂದಿರ ಸಮೀಪ ಅಖಂಡ ಭಾರತ ಗಣೇಶ ಮಹಾಸಭಾದಿಂದ ಈ ಬಾರಿ 14 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ಕೋಲಾರ ಜಿಲ್ಲೆಯ ನೀರಿನ ಸಮಸ್ಯೆಯನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಕೋಲಾರದ ಕಾರಂಜಿಕಟ್ಟೆ, ಸಿ. ಬೈರೇಗೌಡ ಬಡಾವಣೆ, ಧರ್ಮರಾಯಸ್ವಾಮಿ ಬಡಾವಣೆ, ಪಿಸಿ ಬಡಾವಣೆ, ಜಯನಗರ, ಕುವೆಂಪು ನಗರ, ಕುರುಬರ ಪೇಟೆ, ಕೋಟೆ ಬಡಾವಣೆ, ಮೋಚಿ ಪಾಳ್ಯ, ಹಾರೋಹಳ್ಳಿ ಮುಂತಾದ ಕಡೆ ವಿವಿಧ ಸಂಘ ಸಂಸ್ಥೆಗಳಿಂದ ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಾವಿರಾರು ಜನರು ತಮ್ಮ ಮಡದಿ, ಮಕ್ಕಳು ಹಾಗೂ ಕುಟುಂಬದ ಇನ್ನಿತರ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು. ಅನೇಕರು ಸೋಮವಾರ ಸಂಜೆಯೇ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು. ಕೋಲಾರಮ್ಮ ಕೆರೆ ಅಂಗಳದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಹೊಂಡದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆಗಾಗಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸಂಚಾರಿ ಘಟಕವನ್ನು ನಗರಸಭೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ ಸಹ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಇಲ್ಲದೆ ಹಬ್ಬ ಶಾಂತಿಯುತವಾಗಿ ನಡೆಯಿತು.