ಟೊಮೆಟೋ ರಸ್ತೆಗೆ ಸುರಿದ ರೈತರು
ಕನ್ನಡಪ್ರಭ ವಾರ್ತೆ ಅರಸೀಕೆರೆ ಸೆ.10
ಅಗತ್ಯ ವಸ್ತುಗಳ ಬೆಲೆ ಹಾಗೂ ತರಕಾರಿಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದರೇ, ಅದೇ ಮಾರುಕಟ್ಟೆಯಲ್ಲಿ ಟೊಮೆಟೋ ಧಾರಣೆ ದಿಢೀರ್ ಇಳಿಮುಖವಾಗಿದೆ.
ಇದರಿಂದ ಬೆಳೆಗಾರ ತೀವ್ರ ಸಂಕಷ್ಟಕ್ಕೀಡಾಗಿದ್ದು ಹೊಲದಲ್ಲಿರುವ ಟೊಮಟೋ ಕಿತ್ತು ತರುವುದು ಬೇಡವೋ ಎಂಬ ಚಿಂತೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಂಗಳವಾರ ಬೆಲೆ ಕುಸಿತದ ಕಾರಣ ಮಾರಾಟಕ್ಕೆ ತಂದಿದ್ದ ಟೊಮೆಟೋ ಕೊಳ್ಳುವರಿಲ್ಲದೆ ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದ ರಸ್ತೆ ಬದಿಗೆ ರೈತರು ಸುರಿದು ಹೋಗಿದ್ದಾರೆ.
ಕಳೆದ 15-20 ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ 50-60 ಕೆಜಿಗೆ ಮಾರಾಟವಾಗುತ್ತಿದ್ದ ಟೊಮೆಟೋ ಇದೀಗ ಕೇವಲ 10 ರು. ಗೆ 3 ಕೆ.ಜಿ.ಯಂತೆ ಮಾರಾಟವಾಗುತ್ತಿದ್ದು ಕೇಳುವವರೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಬೇಸರಗೊಂಡ ಬೆಳೆಗಾರ ಹಣ್ಣನ್ನು ಸುರಿದು ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ.
ಬದನೆಕಾಯಿ, ಕ್ಯಾರೆಟ್, ಈರುಳ್ಳಿ, ತೊಂಡೇಕಾಯಿ, ಸೀಮೆ ಬದನೆಕಾಯಿ, ಬೀನ್ಸ್, ಹಸಿ ಮೆಣಸಿನಕಾಯಿ, ಬೆಂಡೆಕಾಯಿ, ಸೇರಿದಂತೆ ವಿವಿಧ ತರಕಾರಿಗಳ ಧಾರಣೆ ಗಗನಕ್ಕೇರಿದೆ. ಆದರೆ ಟೊಮಟೋ ಬೆಲೆ ಮಾತ್ರ ಪಾತಾಳಕ್ಕೆ ಇಳಿದಿದ್ದು ಬೆಳೆದಿದ್ದ ರೈತ ಇದೀಗ ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ಸರ್ಕಾರ ರೈತರು ಶೇಖರಿಸಿಡುವ ಶಿಥಲೀಕರಣ ಕೇಂದ್ರ ತೆರೆಯದೆ ಕೇವಲ ಮತಗಳಿಕೆಯ ಯೋಜನೆಗಳತ್ತ ಮಾತ್ರ ಗಮನ ಹರಿಸಿದೆ. ಈಗಲಾದರೂ ಎಚ್ಚೆತ್ತು ಶಿಥಲೀಕರಣ ಘಟಕಗಳನ್ನು ಸ್ಥಾಪಿಸುವ ಮೂಲಕ ಬೆಳೆಗಾರನ ಹಿತ ಕಾಯುವಂತೆ ರೈತರು ಆಗ್ರಹಿಸಿದ್ದಾರೆ.