ವಕ್ರದಂತನ ದರ್ಶನಕ್ಕೆ ಮುಗಿಬಿದ್ದ ಜನ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ಸೆ.10
ವಿಘ್ನ ನಿವಾರಕ ಮಹಾಗಣಪತಿಯ ಮೂರ್ತಿಯನ್ನು ಹಲವೆಡೆ ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಸಂಪ್ರದಾಯಬದ್ಧವಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದು, ಪ್ರಮುಖ ಗಲ್ಲಿ- ಗಲ್ಲಿಗಳಲ್ಲಿ ನಾನಾ ರೀತಿಯಲ್ಲಿ ಕಂಗೊಳಿಸುತ್ತಿರುವ ಗಣಪನನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ.
ಯುವಕರ ಬಳಗ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿ ವರ್ಷದಂತೆ ಗಣಪತಿಯನ್ನು ಪ್ರಮುಖ ಕಡೆ ಪ್ರತಿಷ್ಠಾಪಿಸಿದ್ದು, ಒಂದೊಂದು ಕಡೆ ಒಂದೊಂದು ಭಂಗಿಯಲ್ಲಿರುವ ಆಕರ್ಷಕ ಗಣಪ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ.
ನಗರದ ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗದ ರಸ್ತೆಯಲ್ಲಿರುವ ಹಳೆಯ ಗಣಪತಿ ಗುಡಿಯಲ್ಲಿ 70 ರ ದಶಕದಿಂದಲೂ ಗಣೇಶೋತ್ಸವ ಆಚರಿಸಿಕೊಂಡು ಬಂದಿದ್ದು, ತನ್ನ ಕಂಗಳನ್ನು ಶಿವಲಿಂಗಕ್ಕೆ ಬೇಡರ ಕಣ್ಣಪ್ಪ ಕೊಡುತ್ತಿರುವುದು. ಗರುಡನನ್ನು ವಾಹನವನ್ನಾಗಿಸಿಕೊಂಡಿರುವ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.
ನಗರದ ಮಂಜುನಾಥ ಆಸ್ಪತ್ರೆಯ ರಸ್ತೆಯಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಕರಗ ಪೂಜಾರಿ ರೂಪದಲ್ಲಿ ಗಣಪತಿ ಮೂರ್ತಿಯನ್ನಿಡಲಾಗಿದೆ. ತಲೆಯ ಮೇಲೆ ಹೂವಿನ ಕರಗವನ್ನು ಹೊತ್ತ ಗಣಪತಿ ಹಳದಿ ಬಟ್ಟೆ ಹಾಕಿಕೊಂಡು ಒಂದು ಕೈಯಲ್ಲಿ ಕೋಲು, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡಿದ್ದಾನೆ. ಇನ್ನೂ ನಗರದ ವಾಸವಿ ಕಲ್ಯಾಣ ಮಂಟಪ ಮುಂಭಾಗದಲ್ಲಿ ಪವಡಿಸಿರುವ ಬಾಲ ಗಣಪತಿ, ಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ತನ್ನಗೆ ಇಷ್ಟವಾದ ತಿಂಡಿ ಕಡುಬಿನ ಮೇಲೆ ಕುಳಿತಿದ್ದಾನೆ. ನಾಗಶೇಷನು ಗಣಪನಿಗೆ ನೆರಳಾಗಿದ್ದಾನೆ. ನಗರಸಭೆಯ ಮುಂಭಾಗದಲ್ಲಿ ಗುಹೆಯಲ್ಲಿ ಡಮರುಗದ ಮೇಲೆ ತ್ರಿಶೂಲ ಹಿಂಬದಿಯಲ್ಲಿಟ್ಟುಕೊಂಡು ಗಣಪತಿ ಕುಳಿತಿದ್ದಾನೆ. ನಗರದ ಗಂಗಮ್ಮ ಗುಡಿಯಲ್ಲಿ ಬೆಟ್ಟಗಳ ನಡುವೆ ಹರಿದು ಬರುತ್ತಿರುವ ಜಲಧಾರೆಯ ಜತೆಗೆ ಶಿವಲಿಂಗ, ದೇವಾಲಯದ ನಡುವೆ ಗಣಪತಿ ನಿಲ್ಲಿಸಲಾಗಿದೆ. ಅಲ್ಲದೆ, ಹಣ ಕೊಟ್ಟಷ್ಟು ಸಕ್ಕರೆ ನೀಡುವ ಗಣಪತಿಯು ಇದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿ ವರ್ಷದಂತೆ ನಗರಸಭೆಯ ಸಭಾಂಗಣದಲ್ಲಿ ಆಕರ್ಷಕ ಗಣಪನನ್ನು ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪ್ರತಿಷ್ಠಾಪಿಸಿದ್ದು, ವೀಣೆಯನ್ನು ಹಿಡಿದಿರುವ ಗಣಪನ ಪಾದದಡಿಯಲ್ಲಿ ತಬಲ, ಡೋಲು, ತಂಬೂರಿಯನ್ನು ಹಿಡಿದುಕೊಂಡು ವ್ಯಾದವನ್ನು ನುಡಿಸುತ್ತಿರುವ ತಂಡದೊಂದಿಗೆ ಗಣಪತಿ ಭಜನೆ ಮಾಡುತ್ತಿರುವಂತಿದೆ. ಪ್ರಮುಖವಾಗಿ ನಗರಸಭೆ ಕಚೇರಿಯೊಳಗೆ ಪ್ರವೇಶಿಸುತ್ತಿದ್ದಂತೆ ತರಕಾರಿಯಲ್ಲಿ ಮಾಡಿರುವ ಅಲಂಕಾರಿಕ ವಿನ್ಯಾಸಗಳು ಕಣ್ಮನ ಸೆಳೆಯುತ್ತವೆ. ವಿವಿಧೆಡೆ ಯಾವ ರೀತಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ ಎಂಬ ಕುತೂಹಲದಲ್ಲಿ ಯುವಕರು- ಯುವತಿಯರು ಮಹಿಳೆಯರು ಮಕ್ಕಳರು ಸೇರಿದಂತೆ ಅನೇಕರು ಸಂಚರಿಸಿ ಗಲ್ಲಿಗಲ್ಲಿಯಲ್ಲಿನ ಪ್ರಮುಖ ಕಡೆ ಪ್ರತಿಷ್ಠಾಪಿಸಲಾಗಿದ್ದ ಗಣಪನ ದರ್ಶನ ಪಡೆದರು. ಈ ನಡುವೆ ಮಳೆ ಗಂಟೆಗಟ್ಟಲೆ ಜೋರಾಗಿ ಸುರಿಯುತ್ತಿದ್ದರೂ ವಿವಿಧೆಡೆ ತೆರಳಿ ಗಣಪತಿಗೆ ಪೂಜೆ ಸಲ್ಲಿಸಿದರು.