ವಿನಾಯಕ ಸಪ್ತಾಹದ ಅಂಗವಾಗಿ ನಾಟಕ ಪ್ರದರ್ಶನ
ಗುಡಿಬಂಡೆ: ಪಟ್ಟಣದ ಅರಳೇ ಪೇಟೆಯ ಹಾಲು ಡೈರಿ ಹತ್ತಿರ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿರುವ ವಿನಾಯಕ ಮಹೋತ್ಸವ ಪ್ರಯುಕ್ತ ಸೆ.14 ಸಂಜೆ 6.30 ಕ್ಕೆ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ, ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ ತಂಡದ ಖ್ಯಾತ ಕಲಾವಿದರು ನಡೆಸಿಕೊಡಲಿದ್ದಾರೆ. ಐಶ್ವರ್ಯ ಕಲಾನಿಕೇತನ ಕಾರ್ಯದರ್ಶಿ ಜಿ.ವಿ. ಪ್ರಸನ್ನಕುಮಾರ್ ನಾಟಕ ನಿರ್ದೇಶಿಸಿದ್ದಾರೆ. ಈ ನಾಟಕ ಪ್ರದರ್ಶನವನ್ನು ಆರಕ್ಷಕ ವೃತ್ತ ನಿರೀಕ್ಷಕ ಶಿವಕುಮಾರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಜಿ.ವಿ. ವಿಶ್ವನಾಥ್ ವಹಿಸಲಿದ್ದಾರೆ.
ಚರಂಡಿ ಕಾಮಗಾರಿಗೆ ಅಡ್ಡಿ
ಚಿಂತಾಮಣಿ: ಮುನಗನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ನಡೆಯುತ್ತಿದ್ದ ಚರಂಡಿ ಕಾಮಗಾರಿಗೆ ಗುಂಪೊಂದು ಅಡ್ಡಿಪಡಿಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುನಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮುನಗನಹಳ್ಳಿ ಗ್ರಾಮದಲ್ಲಿ ಸುನಂದಮ್ಮ ಮತ್ತು ನಾಗರಾಜ್ ಎಂಬವರ ಮನೆ ಮುಂದೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡುತ್ತಿದ್ದ ಚರಂಡಿ ಕೆಲಸಕ್ಕೆ ಅಡ್ಡಿಪಡಿಸಿ ಮಾತಿನ ಚಕಮಕಿ ನಡೆಸಿದ ಪರಿಣಾಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಮನೆ ಮಾಲೀಕರಿಗೂ ವಾಗ್ವಾದ ನಡೆದು ಕಾಮಗಾರಿ ಸ್ಥಗಿತಗೊಳಿಸಲಾಯಿತು. ಇದರಿಂದ ಗ್ರಾಮದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಕೂಡಲೇ ಗ್ರಾಮಾಂತರ ಠಾಣೆಯ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗೆ ಸಹಕರಿಸಿದರು. ಇದರಿಂದ ಮನೆ ಮಾಲೀಕರನ್ನು ಸಮಾಧಾನಪಡಿಸಿ ಸರ್ಕಾರಿ ಕೆಲಸಕ್ಕೆ ಸಹಕರಿಸುವಂತೆ ಕೋರಲಾಯಿತು. ನಂತರ ಸುಗಮವಾಗಿ ಕಾಮಗಾರಿ ನಡೆಯಿತು.
ಗೌರಿ ಗಣೇಶ ಹಬ್ಬದ ಸಂಭ್ರಮ
ಶಿಡ್ಲಘಟ್ಟ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇಶ ಸೇರಿದಂತೆ ಎಲ್ಲ ಕಡೆ ಬಹಳ ವಿಜೃಂಭಣೆಯಿಂದ ಮಾಡಿದರು. ಗೌರಿ ಗಣೇಶ ಹಬ್ಬದ ಪ್ರಯುಕ್ತ ತಾಲೂಕಿನ ಹಲವು ಗ್ರಾಮಗಳಲ್ಲಿ ವಿಶೇಷವಾಗಿ ಗ್ರಾಮದ ಯುವಕರೆಲ್ಲ ಒಗ್ಗೂಡಿ ಭಾರಿ ಗಾತ್ರದ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ, ರಾತ್ರಿ ಸಂಗೀತ ಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಗ್ರಾಮದ ಎಲ್ಲ ಜನರು ವೀಕ್ಷಿಸಿದರು. ಅದೇ ರೀತಿ ಜಂಗಮಕೋಟೆ, ಮೇಲೂರು, ದಿಬ್ಬೂರಹಳ್ಳಿ, ಗ್ರಾಮಗಳಲ್ಲೂ ಗೌರಿ ಗಣೇಶ ಹಬ್ಬವನ್ನು ಆಚರಿಸಿ ರಾತ್ರಿ ವೇಳೆ ಭಜನೆ, ಕೋಲಾಟ, ಪುಟಾಣಿ ಮಕ್ಕಳಿಂದ ನೃತ್ಯ ಪ್ರದರ್ಶನಗಳನ್ನು ಮಾಡಿಸಿ ಬಹುಮಾನ ವಿತರಿಸುವ ಮೂಲಕ ಹಬ್ಬವನ್ನು ಆಚರಿಸಿದರು. ಪಟ್ಟಣದ ಅರಳೇ ಪೇಟೆ ಶ್ರೀ ವಿನಾಯಕ ಗೆಳೆಯರ ಬಳಗದ ಯುವಕರಿಂದ ಈ ಬಾರಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಶಾಕಿರಣ ಅಂದ ಮಕ್ಕಳ ಶಾಲೆಗೆ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಅಪಘಾತ: ಒಬ್ಬರ ಸಾವು
ಶಿಡ್ಲಘಟ್ಟ: ಬಚ್ಚಹಳ್ಳಿಯ ಸಮೀಪ ಎರಡು ದ್ವಿಚಕ್ರವಾಹನಗಳು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಆನಂದ ಮೂತರ್(40) ಮೃತ ಪಟ್ಟ ದುರ್ದೈವಿ. ಚಿಂತಾಮಣಿಗೆ ಹೋಗುತ್ತಿದ್ದ ಹಾಗೂ ಶಿಡ್ಲಘಟ್ಟದ ಕಡೆಗೆ ಬರುತ್ತಿದ್ದ ಎರಡು ದ್ವಿಚಕ್ರವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಆನಂದ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆನಂದ ಮೂರ್ತಿ ಬೆಳ್ಳೂಟಿಯ ನಿವಾಸಿಯಾಗಿದ್ದು ಚಿಂತಾಮಣಿಗೆ ಹೋಗುತ್ತಿದ್ದಾಗ ಅಪಘಾನ ನಡೆದಿದೆ. ಇನ್ನೊಬ್ಬ ಬೈಕ್ ಸವಾರನಿಗೆ ಗಾಯಗಳಾಗಿದ್ದು ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ವಿವರಗಳು ತಿಳಿದುಬಂದಿಲ್ಲ.