ಸಮಾಜ ಕಲ್ಯಾಣಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ
ಕ.ಪ್ರ. ವಾರ್ತೆ ಕೋಲಾರ ಸೆ.10
ನಿಮ್ಮ ಕಾರ್ಯ ವೈಖರಿ ತೃಪ್ತಿದಾಯಕವಾಗಿಲ್ಲ, ಕನಿಷ್ಠ ಜವಾಬ್ದಾರಿಯನ್ನು ಅರಿತು ನೀವು ಕೆಲಸ ಮಾಡುತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಪ್ರಭಾರ ಅಧಿಕಾರಿಗಳ ಗುರುಮೂರ್ತಿ ಬಗ್ಗೆ ಜಿಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಚಾರಿ ಅಸಮಾಧಾನ ವ್ಯಕ್ತಪಡಿಸಿ, ಈ ಸಂಬಂಧ ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿಗೆ ಸೂಚಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಚಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯು ತಮ್ಮ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಆಗುತ್ತಿಲ್ಲ, ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆಯಿರಿ ಎಂದು ತಿಳಿಸಿದರು.
ಪ್ರಭಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗುರುಮೂರ್ತಿ ಮಾತನಾಡಿ, ವಸತಿ ನಿಲಯಗಳಲ್ಲಿ ವಾರ್ಡನ್ ಮತ್ತು ಸಿಬ್ಬಂದಿ ಕೊರತೆಯಿರುವುದರಿಂದ ವ್ಯವಸ್ಥೆಯನ್ನು ಸರಿಪಡಿಸಲು ಕಷ್ಟವಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಇದರಿಂದ ಮತ್ತಷ್ಟು ಕುಪಿತರಾದ ಜಿಲ್ಲಾ ಉಸ್ತುವಾರಿ ಕಾರ್ಯದಶ್ಶಿ, ನಿಮ್ಮ ಕಥೆ, ಪುರಾಣಗಳು ಹೇಳಬೇಡಿ, ಕನಿಷ್ಠ ನಿಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗದೆ ಸಿಬ್ಬಂದಿ ಕೊರತೆಯಿದೆ ಎಂದು ಸಬೂಬು ಹೇಳುತ್ತಿದ್ದೀರಾ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾಗಿರುವ ನೀವು ಅದೇ ಇಲಾಖೆಗೆ ಸೇರಿದ ಜಿಲ್ಲಾ ಸಮಾಜ ಕಲ್ಯಾಣ ಬಗ್ಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲವೆಂದರೆ ಹೇಗೆ, ಏನೋ ನೆಪ ಹೇಳಿ ಕರ್ತವ್ಯದಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರಲ್ಲದೆ, ಸರ್ಕಾರಕ್ಕೆ ನಿಮ್ಮ ವಿರುದ್ಧ ವರದಿ ನೀಡುವುದು ಅನಿವಾರ್ಯವೆಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮಾತಿನಿಂದ ಬೇಸತ್ತ ಗುರುಮೂರ್ತಿ ನನ್ನನ್ನು ಈ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಿ, ಎರಡೂ ಹುದ್ದೆಗಳನ್ನು ನಿಬಾಯಿಸುವುದು ಕಷ್ಟ. ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ, ಈಗಾಗಲೇ ತಾವು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒಗೆ ಮನವಿ ಸಲ್ಲಿಸಿ ಪ್ರಬಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹುದ್ದೆಯಿಂದ ಮುಕ್ತಿ ನೀಡುವಂತೆ ಕೋರಿದ್ದಾನೆಂದು ತಿಳಿಸಿದಾಗ ಸರ್ಕಾರ ಸೂಚಿಸಿದ ರೀತಿಯಲ್ಲಿ ಕೆಲಸ ಮಾಡಬೇಕು, ನೀವು ಹೇಳಿದಂತೆ ಕೇಳಲು ಇದೇನು ವಿಜಿಲೆನ್ಸ್ ಸಭೆಯೇ ಎಂದು ಛೇಡಿಸಿದರು.