ಕೆಜಿಎಫ್: ಸಂಭ್ರಮದ ಗಣೇಶ ಹಬ್ಬ ಆಚರಣೆ
ಕೆಜಿಎಫ್: ಪ್ರತಿ ವರ್ಷದಂತೆ ಈ ವರ್ಷವೂ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಇಟ್ಟು ಅತಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸಲಾಯಿತು.
ಗಣೇಶ ಮೂರ್ತಿಗಳನ್ನಿಟ್ಟು ಮೂರು ದಿನಗಳಾದ ಬುಧವಾರ ನಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಯುವಕರ ಸಂಘಗಳು ಕೆಜಿಎಫ್ ನಗರಾದ್ಯಂತ ಇತರೆ ಬಡಾವಣೆಗಳಲ್ಲಿ ಮತ್ತು ಅಡ್ಡರಸ್ತೆಗಳಲ್ಲಿ ಇಡಲಾಗಿದ್ದ ವಿವಿಧ ರೀತಿಯ ಆಕರ್ಷಕ ಗಣೇಶ ಮೂರ್ತಿಗಳನ್ನು ಸಾಮೂಹಿಕ ವಿಸರ್ಜನೆಗೆ ನಗರದ ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣ ದೇವಾಲಯದಿಂದ ಚಾಲನೆ ನೀಡಲಾಗಿತ್ತು.
ಗಣೇಶ ಮೂರ್ತಿಗಳನ್ನು ಟೆಂಪೋ, ಎತ್ತಿನಗಾಡಿ, ಟ್ರ್ಯಾಕ್ಟರ್ಗಳ ಮೂಲಕ ಹೊತ್ತು ನಗರದ ಗೀತಾರಸ್ತೆ, ಪ್ರಿಚರ್ಡ್ರಸ್ತೆ, ಗಾಂಧಿ ವೃತ್ತ, ಸೂರಜಮುಲ್ ವೃತ್ತ ಸೇರಿದಂತೆ ಇತರೇ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ರೀತಿ ಆಕರ್ಷಕ ಮತ್ತು ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ವೀಕ್ಷಿಸಲು ನಗರದ ಮಹಿಳೆಯರು, ಯುವಕರು, ವಿವಿಧ ಬಡಾವಣೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಗಣೇಶ ಮೂರ್ತಿಗಳನ್ನು ಪಾರಂಡಹಳ್ಳಿ ಕೆರೆಯಲ್ಲಿ ವಿಸರ್ಜಿಸಲು ಕೆಜಿಎಫ್ ನಗರಸಭೆ ವತಿಯಿಂದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.