ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೊಲೆ ಆರೋಪಿ ಬಂಧಿಸದಿದ್ದರೆ ಕೋಲಾರ ಬಂದ್

Rashmi Kasaragodu
Updated On : 11 Sept 2013, 11:43 am

ಕನ್ನಡಪ್ರಭ ವಾರ್ತೆ   ಕೋಲಾರ   ಸೆ.11
ಕಳೆದ ಎರಡು ತಿಂಗಳ ಹಿಂದೆ ತನ್ನ ಪತ್ನಿ ವೀಣಾ ಮತ್ತು ಮಗಳು ದೀಪ್ತಿಯನ್ನು ವರದಕ್ಷಿಣೆ ಹಾಗೂ ಎರಡನೇ ಮದುವೆಗಾಗಿ ಕೊಂದಿರುವ ಆರೋಪಿ ಶ್ರೀನಿವಾಸಪುರ ತಾಲೂಕಿನ ಶಾಗತ್ತೂರು ಗ್ರಾಮದ ಎಸ್.ಕೆ. ಸಂತೋಷ್ಕುಮಾರ್ ನಾಪತ್ತೆಯಾಗಲು ರಕ್ಷಣೆ ನೀಡಿರುವ ಪೊಲೀಸರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು ಹಾಗೂ ಆರೋಪಿಯನ್ನು ಕೂಡಲೇ ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಆಗ್ರಹಿಸಿದವು.
ನಗರದ ಪ್ರವಾಸಿ ಮಂದಿರದಿಂದ ಎಂಜಿ ರಸ್ತೆ, ಕಾಲೇಜು ರಸ್ತೆ, ಡಿವಿಜಿ ರಸ್ತೆ, ಮೆಕ್ಕೆ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಪೊಲೀಸರು ಇಡಲಾಗಿದ್ದ ಕಟಕಟ್ಟೆ ಭೇದಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು.
ಪ್ರತಿಭಟನಾಕಾರರು ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕುಗಿದರು. ಈ ಹಿಂದೆ ಕೆಲ ಜಿಲ್ಲಾಧಿಕಾರಿಗಳು ಯಾವುದಾದರೂ ದೊಡ್ಡ ಪ್ರತಿಭಟನೆ ಇಲ್ಲವೇ ಮುತ್ತಿಗೆ ಕಾರ್ಯಕ್ರಮ ನಡೆದಲ್ಲಿ ಭಯ ಇಲ್ಲವೇ ಹಿಂಜರಿಕೆಯಿಂದ ಕಚೇರಿ ಖಾಲಿ ಮಾಡಿ ಪ್ರತಿಭಟನಾಕಾರರ ಛೀಮಾರಿಗೆ ಒಳಗಾಗುತ್ತಿದ್ದರು. ಆದರೆ, ನೂತನ ಜಿಲ್ಲಾಧಿಕಾರಿ ಡಿ.ಕೆ. ರವಿ ಯಾವುದೇ ಆಂಜಿಕೆ ಇಲ್ಲದೆ ಪ್ರತಿಭಟನಾಕಾರರ ಮುಂದೆ ನಿಂತು ಸಮಸ್ಯೆ ಅಲಿಸುವ ಮೂಲಕ ಪ್ರತಿಭಟನಾಕಾರರ ಕೋಪ ತಣ್ಣಗಾಗಿಸುವಲ್ಲಿ ಸಫಲರಾದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ನಮಗೆ ಜಿಲ್ಲಾಧಿಕಾರಿಗಳ ಅಥವಾ ಪೊಲೀಸರ ಮೇಲೆ ಯಾವುದೇ ದ್ವೇಷ ಇಲ್ಲ. ಕೊಲೆ ಆರೋಪಿಯನ್ನು ಬಂಧಿಸಲು ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನವಿದೆ, ಲಾಡೆನ್ ಅಂತಹ ಉಗ್ರಗಾಮಿ ಹಿಡಿಯಲು ಸಾಕಷ್ಟು ತಂತ್ರಜ್ಞಾನ ಬಳಿಸಲಾಗಿದೆ. ಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿ ಬಚ್ಚಿಟ್ಟುಕೊಂಡಿರುವ ಆರೋಪಿ ಸಂತೋಷ್ಕುಮಾರ್ನನ್ನು ಬಂಧಿಸಲು ಏಕೆ ಆಗುತ್ತಿಲ್ಲವೆಂದು ಪ್ರಶ್ನಿಸಿದರು. ಜನವಾದಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗೀತಾ ಮಾತನಾಡಿ, ನಾವೇನು ಭಯೋತ್ಪಾದಕರಲ್ಲ. ನ್ಯಾಯ ಕೇಳಲು ಡಿಸಿ ಕಚೇರಿಗೆ ಬಂದಿದ್ದೇವೆ. ಪುರುಷ ಪೊಲೀಸರು ನಮ್ಮನ್ನು ಏಳೆದಾಡಿದ್ದಾರೆ. ಕೊಲೆ ಆರೋಪಿ ಸಂತೋಷ್ಕುಮಾರ್ ಘಟನೆ ನಂತರ ಒಂದು ವಾರ ಕೋಲಾರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸುತ್ತಾಡಿದ್ದಾನೆ. ಪೊಲೀಸರು ಎಫ್ಐಆರ್ ದಾಖಲು ಮಾಡಿದ ತಕ್ಷಣ ಆರೋಪಿಯನ್ನು ಏಕೆ ಬಂಧಿಸಲಿಲ್ಲ. ಈ ಪ್ರಕರಣದಲ್ಲಿ ಆರೋಪಿಯ ರಕ್ಷಣೆ ಮಾಡಿರುವ ಪೊಲೀಸರ ವಿರುದ್ಧ ಇಲಾಖೆ ತನಿಖೆ ಕೈಗೊಂಡು ತಪ್ಪಿತಸ್ಥ ಪೊಲೀಸರನ್ನು ಅಮಾನತುಪಡಿಸಬೇಕು. ಮೃತರ ಕಡೆಯವರಿಗೆ ನ್ಯಾಯ ಬದಗಿಸಬೇಕೆಂದು ಆಗ್ರಹಿಸಿದರು.
ಮುಟ್ಟುಗೋಲು ಹಾಕಿ: ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ಕ್ರಮ ಕೈಗೊಳ್ಳಬೇಕು. ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಗೀತಾ ಒತ್ತಾಯಿಸಿದರು.
ಮಳೆ ಬೀಳುತ್ತಿರುವುದರಿಂದ ನಾವು ಈ ದಿನದಿಂದ ಡಿಸಿ ಕಚೇರಿಯ ಕಾರಿಡಾರ್ನಲ್ಲೇ ಧರಣಿ ಮುಂದುವರಿಸುತ್ತೇವೆಂದು ತಿಳಿಸಿದರಲ್ಲದೆ, ಆರೋಪಿ ಬಂಧನದವರೆಗೆ ಪ್ರತಿಭಟನೆ ನಿಲ್ಲದೆಂದು ತಿಳಿಸಿದರು.
ಸಿಪಿಐ(ಎಂ)ಜಿಲ್ಲಾ ಮುಖಂಡ, ಕೋಲಾರ ನಗರಸಭೆ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಆರೋಪಿಯ ಬಂಧನಕ್ಕೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ದೂರಿದರು.
ಗಡುವು: ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿವಿಧ ಸಂಘಟನೆಗಳ ಆಯ್ದ ಮುಖಂಡರು ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಮಾತುಕತೆ ಮುಂದುವರಿಸಿ ಪೊಲೀಸರ ಕುಮ್ಮಕ್ಕಿನಿಂದ ಆರೋಪಿ ತಪ್ಪಿಸಿಕೊಂಡಿದ್ದಾನೆ. ಮೊದಲು ಪೊಲೀಸರ ಬಗ್ಗೆ ಇಲಾಖಾ ತನಿಖೆ ನಡೆಸಿ ಎಂದು ಒತ್ತಾಯಿಸಿದರಲ್ಲದೆ, ಸೆ. 18ರೊಳಗೆ ಎಲ್ಲಾ ಬೇಡಿಕೆ ಈಡೇರಿಸದಿದ್ದರೆ ಕೋಲಾರ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ವಿಜಯಕುಮಾರ್, ಸಿಪಿಐ(ಎಂ)ಮುಖಂಡ ಶ್ರೀನಿವಾಸ್, ಅರ್ಜುನನ್, ಎಸ್ಎಫ್ಐನ ಜಿಲ್ಲಾಧ್ಯಕ್ಷ ಅಂಬರೀಷ್, ಜಿಲ್ಲಾ ಕಾರ್ಯದರ್ಶಿ ವಾಸುದೇವರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಈಶ್ವರಮ್ಮ, ತಾಲೂಕು ಅಧ್ಯಕ್ಷೆ ಆಂಜನಮ್ಮ, ಕಾರ್ಯದರ್ಶಿ ಸುಶೀಲ, ಜಿಲ್ಲಾ ಸಮಿತಿ ಸದಸ್ಯೆ ಜಯಲಕ್ಷ್ಮೀ, ಸಮತಾ ಸೈನಿಕ ದಳದ ಪಂಡಿತ್ ಮುನಿವೆಂಕಟಪ್ಪ, ಅಂಗನವಾಡಿ ನೌಕರರ ಸಂಘದ ಮುಖಂಡರಾದ ಮುನಿರಾಜಮ್ಮ, ನಾಗರತ್ನಮ್ಮ ಮುಂತಾದವರು ಇದ್ದರು.




ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಮುಖಂಡರ ಮಾತುಗಳನ್ನು ಶಾಂತಚಿತ್ತವಾಗಿ ಅಲಿಸಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ಪ್ರತಿಭಟನಾಕಾರರ ಅಳಲು ನನಗೆ ಅರ್ಥವಾಗಿದೆ. ನನ್ನ ಬಗ್ಗೆ ಅಥವಾ ಪೊಲೀಸರ ಬಗ್ಗೆ ತಾವು ವ್ಯಕ್ತಪಡಿಸಿದ ಆಕ್ರೋಶ, ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಪೊಲೀಸರು ಸರಿಯಾಗಿ ಕೆಲಸ ನಿರ್ವಹಿಸಿಲ್ಲವೆಂಬ ದೂರಿನ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸುತ್ತೇನೆ. ಇನ್ನು ಆರೋಪಿಯ ಪತ್ತೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ತಂತ್ರಜ್ಞಾನ ಪ್ರಯೋಗಿಸಲಾಗುತ್ತಿದೆ. ಖಚಿತ ಮಾಹಿತಿ ಇಲ್ಲದೆ ಆರೋಪಿಯನ್ನು ಬಂಧಿಸಲು ಕಷ್ಟವಾಗುವುದರಿಂದ ತಾವುಗಳು ಮಾಹಿತಿ ನೀಡ ಆರೋಪಿಯ ಬಂಧನಕ್ಕೆ ಸಹಕಾರ ನೀಡುವಂತೆ ತಿಳಿಸಿದರು. ನಿಮ್ಮ ಜೊತೆ ರಾಜಿ ಸಂಧಾನಕ್ಕಿಂತ ನನಗೆ ಆರೋಪಿಯ ಬಂಧನ ಮುಖ್ಯವೆನಿಸಿದೆ. ಅದಕ್ಕಾಗಿ ನಾನು ಧರಣಿ ಸ್ಥಳಕ್ಕೆ ಬರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಆಗಾಗ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬೇಗನೆ ಆರೋಪಿಯನ್ನು ಬಂಧಿಸಲು ಹೆಚ್ಚು ಶ್ರಮಿಸುವಂತೆ ಸೂಚಿಸಿದ್ದಾರೆಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಬಳಿ ಮತ್ತೊಮ್ಮೆ ಸಭೆ ನಡೆಸಿ ಪ್ರಕರಣ ಇತ್ಯರ್ಥಕ್ಕೆ ಸೂಚಿಸುತ್ತೇನೆ. ತಾವು ಮಳೆಯಲ್ಲಿ ನೆನೆಯುವುದು ಬೇಡ. ಪ್ರತಿಭಟನೆ ನಿಲ್ಲಿಸಿ ಜಿಲ್ಲಾಡಳಿತದ ದೈನಂದಿನ ಕೆಲಸ ಕಾರ್ಯಕ್ಕೆ ಸಹಕಾರ ನೀಡಿ. ಆರೋಪಿ ಯಾವುದೇ ಕಾರಣಕ್ಕೂ ಕಾನೂನಿನಿಂದ ತಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement