ತೆಲಂಗಾಣ ಮಾದರಿಯಲ್ಲಿ ಶಾಶ್ವತ ನೀರಾವರಿ ಹೋರಾಟ
ಚಿಂತಾಮಣಿ: ಶಾಶ್ವತ ನೀರಾವರಿ ಯೋಜನೆ ಜಾರಿಗೆಗಾಗಿ ಆಗ್ರಹಿಸಿ ತೆಲಂಗಾಣ ಹೋರಾಟದಂತೆ ಹೋರಾಟವನ್ನು ಹಂತ ಹಂತವಾಗಿ ಉಗ್ರವಾಗಿ ನಡೆಸುತ್ತೇವೆಂದು ದಲಿತ ಮುಖಂಡ ಎನ್. ಮುನಿಸ್ವಾಮಿ ಕರೆ ನೀಡಿದರು.
ಪಟ್ಟಣದಲ್ಲಿ ಬುಧವಾರ ಶಾಶ್ವತ ನೀರಾವರಿಗಾಗಿ ಹಮ್ಮಿಕೊಂಡಿದ್ದ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಉಭಯ ಜಿಲ್ಲೆಗಳಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳೊಂದಿಗೆ ಕೈ ಜೋಡಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಆಂಧ್ರಪ್ರದೇಶದ ತೆಲಂಗಾಣ ಪ್ರತ್ಯೇಕ ರಾಜ್ಯ ಮಾದರಿಯಂತೆ ಶಾಶ್ವತ ನೀರಾವರಿಗಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದಾಗಿ ಸಭೆಯಲ್ಲಿ ಹೇಳಿದರು. ಜನಪ್ರತಿನಿಧಿಗಳು ಶಾಶ್ವತ ನೀರಾವರಿ ಹೋರಾಟಕ್ಕೆ ಕೈ ಜೋಡಿಸಿ ಮುಖ್ಯಮಂತ್ರಿಗಳಿಗೆ ಇಲ್ಲಿನ ರೈತರ ಹಾಗೂ ಕೂಲಿ ಕಾರ್ಮಿಕರ ನೀರಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಶೀಘ್ರವೇ ಯೋಜನೆಯನ್ನು ಜಾರಿಗೆ ತರಲು ಮುಂದಾಗಬೇಕೆಂದು ಸಭೆಯಲ್ಲಿ ತಿಳಿಸಿದರು.
ನಂತರ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ಯಾವುದೇ ನದಿ ಮೂಲಾಧಾರವಿಲ್ಲದೆ ಕೆರೆಕುಂಟೆಗಳನ್ನೇ ನಂಬಿ ರೈತರು ಆಕಾಶದತ್ತ ನೋಡುತ್ತಾ ಸರಿಯಾದ ಮಳೆ ಬೆಳೆ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶಾಶ್ವತ ನೀರಾವರಿ ಯೋಜನೆಗೆ ಜಾರಿಗೆ ತರಲು ಮುಂದಾಗಬೇಕೆಂದು ಸರ್ಕಾರದ ಮೇಲೆ ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಿದ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಜಾನಪದ ಕಲಾವಿದ ಮುನಿರೆಡ್ಡಿ, ಜಯಕರ್ನಾಟಕ ಸಂಘಟನೆಯ ಬುಲೆಟ್ ರಮೇಶ್,ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ರಘುನಾಥರೆಡ್ಡಿ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಕವಾಲಿ ವೆಂಕಟರವಣಪ್ಪ ಮತ್ತು ಲಕ್ಷ್ಮಿನಾರಾಯಣ, ತಾಲೂಕು ಕರವೇ ಅಧ್ಯಕ್ಷ ಅಂಬರೀಷ್ ಸೇರಿದಂತೆ ಇನ್ನೂ ಹಲವರು ಶಾಶ್ವತ ನೀರಾವರಿ ಹೋರಾಟದ ಬಗ್ಗೆ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ನಾಗದೇನಹಳ್ಳಿ ನಾರಾಯಣಸ್ವಾಮಿ,ಅಬ್ಬುಗುಂಡು ವೇಣು, ನಲ್ಲಬಾಬು, ಶೋಭ, ನರಸಿಂಹಪ್ಪ, ಲಕ್ಷ್ಮಣ್, ಬೈಯಪ್ಪರೆಡ್ಡಿ,ಪಂಕಜ್ ಸೇರಿದಂತೆ ಇನ್ನೂ ಹಲವು ಸಂಘ ಸಂಸ್ಥೆಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.