ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾಳೆ ಮಾಲೂರಲ್ಲಿ ರೈತರ ಬೃಹತ್ ಸಮಾವೇಶ

Rashmi Kasaragodu
Updated On : 11 Sept 2013, 11:45 am

ಕ.ಪ್ರ.ವಾರ್ತೆ   ಮಾಲೂರು   ಸೆ. 11
ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ತಾಲೂಕು ಮಟ್ಟದಲ್ಲಿ ಸೆ. 13ರಂದು ಪಟ್ಟಣದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಅಬ್ಬಣ್ಣಿ ಶಿವಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಶ್ವತ ನೀರಾವರಿ ಹೋರಾಟ ಪ್ರಾರಂಭವಾಗಿ 16 ವರ್ಷವಾದರೂ ರಾಜಕೀಯ ಪ್ರವೇಶದಿಂದ ಹೋರಾಟದ ಕಾವು ಕಳೆದುಕೊಳ್ಳುತ್ತಿದೆ. ಪ್ರತಿ ಸರ್ಕಾರವು ತಮಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳುತ್ತ ವಂಚಿಸುತ್ತಿದೆ.
ಅದೇ ರೀತಿ ಇಂದಿನ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ನೀರನ್ನು ಬಯಲುಸೀಮೆಗೆ ಹರಿಸುವುದಾಗಿ ಹೇಳುತ್ತಿದೆ.
ಇದುವರೆಗೂ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸದ ಸರ್ಕಾರವು ಡಿಪಿಆರ್ ಆದೇಶ ಸಹ ನೀಡಿಲ್ಲ. ಆದರೆ, ಬಯಲುಸೀಮೆ ಜನರ ಕಣ್ಣು ಒರೆಸಲು ಈ ತಿಂಗಳಲ್ಲೇ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿ ಅವರು ತಮ್ಮ ಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಬಂದಾಗೆಲ್ಲ ಕೇವಲ ಭಾಷಣಕ್ಕಾಗಿ ಎತ್ತಿನಹೊಳೆ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದ ಶಿವಣ್ಣ ಅವರು, ರಾಜ್ಯ ಸರ್ಕಾರವು ಇಲ್ಲಿನ ಶಾಶ್ವತ ನೀರಾವರಿ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಮಾಡಲು ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಪೂರ್ವಭಾವಿಯಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ರೈತ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ತಾಲೂಕು ಅಧ್ಯಕ್ಷ ಬೆಂ.ರಮೇಶ್ ಮಾತನಾಡಿ, ಬಯಲುಸೀಮೆಗಾಗಿ ಶಾಶ್ವತ ನೀರಾವರಿ ಯೋಜನೆಯ ಶೀಘ್ರ ಅನುಷ್ಠಾನ ಸೇರಿದಂತೆ ಮಾಲೂರು-ಬಂಗಾರಪೇಟೆ ತಾಲೂಕಿಗೆ ನೀರು ಹರಿಸಬಹುದಾದ ಬೆಂಗಳೂರು ಕೊಳಚೆ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಲು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಕೈಗಾರಿಕೆಗಾಗಿ ಸಾವಿರಾರು ಎಕರೆ ಕಳೆದುಕೊಂಡಿರುವ ಮಿಂಡಹಳ್ಳಿ ಗ್ರಾಮದಲ್ಲಿ ಮತ್ತೇ 2 ಹಂತದ ಕೈಗಾರಿಕೆ ಘಟಕಗಳಿಗಾಗಿ ರೈತರ ಜಮೀನನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸುವ ನಿರ್ಣಯವನ್ನು ಸಮಾವೇಶದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮಾಡಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಕೂತ್ತಮಿರಿ ಜಿ.ಮಂಜುನಾಥ್, ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ವೆಂಕಟಾಚಲಪತಿ, ಕೋಡೂರು ಕೆ.ವಿ.ಗೋಪಾಲ್, ಪ್ರಧಾನ ಕಾರ್ಯದರ್ಶಿ ತಿ.ದೇವರಾಜ್, ಉಪಾಧ್ಯಕ್ಷ ವ. ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement