ಪೊಲೀಸ್ ಅಧಿಕಾರಿ ವಿರುದ್ಧ ಶಾಸಕ ವರ್ತೂರ್ ಗರಂ
ಕೋಲಾರ: ಅಪರಾಧ ನಿಗ್ರಹ ದಳದ ಹೆಸರಿನಲ್ಲಿ ಅಮಾಯಕರಿಂದ ಹಣ ದೋಚುತ್ತಿರುವ ಪೊಲೀಸ್ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಶಾಸಕ ವರ್ತೂರ್ ಪ್ರಕಾಶ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಜೂಜಾಟದ ಆರೋಪದ ಮೇಲೆ ಅಪರಾಧ ನಿಗ್ರಹ ದಳದ ಅಧಿಕಾರಿ ನಾರಾಯಣಸ್ವಾಮಿ ಮತ್ತು ತಂಡದವರು ಜೂಜಾಟದ ಆರೋಪದ ಮೇಲೆ ನಗರದ ಕಠಾರಿ ಪಾಳ್ಯದ ಯುವಕ ದಿಲೀಪ್ ಎಂಬುವನನ್ನು ಬಂಧಿಸಿ ಹಲ್ಲೆ ಮಾಡಿರುವುದಲ್ಲದೆ, ಯುವಕನ ಬಳಿ ಇದ್ದ ಹಣವನ್ನು ದರೋಡೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಹಲ್ಲೆಗೆ ಒಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿಲೀಪ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬುಧವಾರ ರಾತ್ರಿ ಭೇಟಿ ನೀಡಿದ್ದ ಶಾಸಕರು, ಪೊಲೀಸ್ ಅಧಿಕಾರಿ ನಾರಾಯಣಸ್ವಾಮಿ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಮಣಿದು ದರ್ಪ ಪ್ರದರ್ಶಿಸುತ್ತಿದ್ದಾರೆ, ಅಪರಾಧ ನಿಗ್ರಹ ದಳದ ಹೆಸರಿನಲ್ಲಿ ಬಡಪಾಯಿಗಳಿಂದ ಹಣವನ್ನು ಸೂಲಿಗೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದರಿ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸುತ್ತೇನೆ, ಈ ವಿಚಾರವಾಗಿ ಗೃಹ ಸಚಿವರ ಗಮನಕ್ಕೂ ತರುವುದಾಗಿ ಭರವಸೆ ನೀಡಿದರು.
ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಬೇಕೇ ಹೊರತು ದರ್ಪ, ದೌರ್ಜನ್ಯ ಎಸಗುವುದು ಸರಿಯಲ್ಲವೆಂದು ಎಚ್ಚರಿಕೆ ನೀಡಿದರು.