ಮರಳು ದಂಧೆ ತಡೆಯದ ಅಧಿಕಾರಿಗಳು: ರೈತ ಸಂಘ ಆರೋಪ
ಕೆಜಿಎಫ್: ಕ್ಷೇತ್ರದ ಕ್ಯಾಸಂಬಳ್ಳಿ ಹೋಬಳಿ ಬೆಂಡವಾರ ಗ್ರಾಮದ ಪಾಲಾರ್ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ಕಂದಾಯ ಅಧಿಕಾರಿಗಳಿಗೆ ಮತ್ತು ತಹಸೀಲ್ದಾರ್ರರಿಗೆ ದೂರು ನೀಡಿದ್ದರೂ ಮರಳು ಮಾಫಿಯಾ ತಡೆಯಲು ಮತ್ತು ಅವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸದೆ ಕೈಕಟ್ಟಿ ಕುಳಿತಿರುವ ಅಧಿಕಾರಿಗಳ ಧೋರಣೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ತೀವ್ರವಾಗಿ ಖಂಡಿಸಿದರು.
ಬೆಂಡವಾರ ಗ್ರಾಮದ ಪಾಲಾರ್ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆದು ಟ್ರ್ಯಾಕ್ಟರ್ಗೆ ತುಂಬಿಸಿಕೊಳ್ಳುತ್ತಿದ್ದಾಗ ಹುಲ್ಕೂರು ಹರಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ ರೈತ ಸಂಘದ ಮುಖಂಡರುಗಳು ಮರಳು ಟ್ರ್ಯಾಕ್ಟರ್ನ್ನು ತಡೆದು ನಂತರ ಮಾತನಾಡಿದ ರೈತ ಸಂಘದ ಮುಖಂಡರು ಜಿಲ್ಲೆಯಲ್ಲಿ ಈಗಾಗಲೇ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಕೆರೆಗಳು ಮತ್ತು ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮರಳು ಮಾಫಿಯಾ ತಾಂಡವಾಡುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕ್ಯಾಸಂಬಳ್ಳಿ ಸುತ್ತಮುತ್ತ ರಾಮಸಾಗರ ಕೆರೆ ಮತ್ತು ಬೆಂಡವಾರ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಬೆಂಗಳೂರು ಸೇರಿದಂತೆ ಇತರೆ ಪ್ರಮುಖ ನಗರಗಳಿಗೆ ಪ್ರತಿದಿನ ಸುಮಾರು 50 ರಿಂದ 60 ಲಾರಿಗಳಷ್ಟು ಮರಳು ಸಾಗಾಣೆ ಮಾಡಲಾಗುತ್ತಿದೆ. ಮರಳು ಮಾಫಿಯಾ ದಂದೆಯನ್ನು ತಡೆದು ಸಂಬಂದಪಟ್ಟವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕಾದ ಅಧಿಕಾರಿಗಳು ಮರಳು ಮಾಫಿಯಾ ಜೊತೆ ಶಾಮೀಲಾಗಿ ನೆಲದ ಒಡಲನ್ನು ಬರಿದು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಗಣಿ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್ ಕೂಡಲೇ ಎಚ್ಚೆತ್ತುಕೊಂಡು ಕ್ಯಾಸಂಬಳ್ಳಿ ಹೋಬಳಿಯ ಸುತ್ತಮುತ್ತಲು ನಡೆಯುತ್ತಿರುವ ಅಕ್ರಮ ಮರಳು ದಂದೆ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿ ಸೂಕ್ತ ಕ್ರಮವನ್ನು ಜರುಗಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮರಳು ಗಣಿಗಾರಿಕೆ ತಡೆಗೆ ಸಂಘವೇ ಕಾರ್ಯಾಚರಣೆ ಮಾಡಿ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ವೇಳೆ ಹಸಿರು ಸೇನೆ ಜಿಲ್ಲಾಧ್ಯಕ್ಷ ನಾರಾಯಣಗೌಡ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಬೇತಮಂಗಲ ಮಂಜುನಾಥ್, ಕೂಳೂರು ಗಣೇಶ್, ನಾರಾಯಣಸ್ವಾಮಿ, ದೊಡ್ಡಕಾರಿ ವಿಶ್ವನಾಥ್ ಸೇರಿದಂತೆ ಇತರೆ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.