ಮಳೆಗೆ ನಗರಸಭೆ ಕಡತಗಳಿಗೆ ಹಾನಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 11
ಕಳೆದ ಎರಡ್ಮೂರು ದಿನಗಳಿಂದಲೂ ಬೀಳುತ್ತಿರುವ ಮಳೆಯ ಕಾರಣ ನಗರಸಭೆಯ ಕಟ್ಟಡದಿಂದ ನೀರು ಸೋರಿಕೆಯಾಗಿ ಕಚೇರಿಯಲ್ಲಿಟ್ಟಿರುವ ಕಡತಗಳು ನೆನೆದು ಹಾಳಾಗಿವೆ.
ಮನೆಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡಿದರೂ ಎನ್ನುವಂತೆ ಅಧಿಕಾರಿಗಳು ಮಳೆ ನೀರು ಬಿದ್ದು ಕಡತಗಳು ಪೂರ್ತಿಯಾಗಿ ತೇವಗೊಂಡ ಮೇಲೆ ಸಂರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಪುರಸಭೆಯಿಂದ ನಗರಸಭೆಯಾಗಿ ಚಿಕ್ಕಬಳ್ಳಾಪುರ ಪರಿವರ್ತನೆಗೊಂಡರೂ ಜಿಲ್ಲಾ ಕೇಂದ್ರದಲ್ಲಿರುವ ನಗರಸಭಾ ಕಚೇರಿಯು ಇನ್ನೂ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಣ್ಣ ಹಂದಿಗೂಡಿನಂತಿರುವ ಕೊಠಡಿಗಳಲ್ಲಿ ಪ್ರಮುಖ ಕಡತಗಳನ್ನಿಟ್ಟುಕೊಂಡು ಅಧಿಕಾರಿಗಳು ಕಿರಿಕಿರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಿಬ್ಬಂದಿ ಕೊರತೆ, ಸೂಕ್ತದ ಜಾಗದ ಸಮಸ್ಯೆಯ ಜತೆಗೆ ನಿರ್ಲಕ್ಷ್ಯ ಧೋರಣೆಯಿಂದ ಸಮರ್ಪಕವಾಗಿ ಕಡತ ನೋಡಿಕೊಳ್ಳುವ ಕೆಲಸವಾಗುತ್ತಿಲ್ಲ. ಅಗತ್ಯವಿರುವ ಕಡತಗಳು ಸೂಕ್ತ ಸಮಯಕ್ಕೆ ಸಿಗುವುದಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ಕೆಲ ಕಡತಗಳು ನಾಪತ್ತೆಯಾಗಿ ಇಂದಿಗೂ ಗೊಂದಲದಲ್ಲಿಯೇ ಇವೆ. ಈ ನಡುವೆ ಮಳೆಗೆ ಕಡತಗಳು ನಾಶವಾಗುತ್ತಿದ್ದರೂ ಕಾಪಾಡಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಿರುವಾಗ ಮಳೆ ಬಂದಾಗಲೆಲ್ಲಾ ನಗರಸಭೆ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತ ಕಡತಗಳು ನೆನೆದು ಹೋಗಿ ಮುದ್ದೆಯಂತಾಗುತ್ತಿವೆ.
ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ನಗರಸಭೆ ಕಚೇರಿಯಲ್ಲಿ ಖಾತೆಗಳನ್ನು ನಿರ್ವಹಿಸುವ ಡಿಸಿಬಿ ಶಾಖೆ, ಕಂದಾಯ ದಾಖಲೆಗಳನ್ನು ಹೊಂದಿರುವ ಕೊಠಡಿ, ಕಚೇರಿ ನಿರ್ವಹಣೆ ದಾಖಲೆಗಳ ಕೊಠಡಿಯ ಗೋಡೆಗಳಿಂದ ನೀರು ಇಳಿಯುತ್ತಿದ್ದು, ಬೀರು, ಕುರ್ಚಿಗಳ ಮೇಲೆ ನೀರು ನಿಂತುಕೊಳ್ಳುತ್ತಿದೆ.
ಇನ್ನೂ ನೀರನ್ನು ಹೊರ ಹಾಕುವುದೇ ಸಿಬ್ಬಂದಿಗೆ ದೊಡ್ಡ ಹರಸಾಹಸವಾಗಿದೆ. ಕೊಠಡಿಗಳಲ್ಲಿ ಬೀಳುತ್ತಿರುವ ನೀರನ್ನು ಸಂಗ್ರಹಿಲು ಬಿಂದಿಗೆ, ಬಕೆಟ್ ಇಡಲಾಗಿದೆ.
ನಗರಸಭೆ ಕಚೇರಿಗೆ ಹೊಂದಿಕೊಂಡಂತೆ ಹೊಸ ಕಟ್ಟಡ ನಿರ್ಮಿಸುತ್ತಿದ್ದು ಮರಳು, ಜಲ್ಲಿ ಕಲ್ಲುಗಳನ್ನು ಕಚೇರಿಯ ಕೊಠಡಿಗಳ ಮೇಲೆ ದಾಸ್ತಾನು ಮಾಡಿರುವುದು ಸಹ ಮಳೆ ನೀರು ಸಂಗ್ರಹವಾಗಿ ಗೋಡೆಗಳಿಂದ ಸೋರಿಕೆಯಾಗಲು ಕಾರಣ ಎನ್ನಲಾಗಿದೆ.
ಮಳೆ ಬಂದ ಹಿನ್ನೆಲೆಯಲ್ಲಿ ಕಡತಗಳು ನೆನೆದು ಹೋಗಿದ್ದು, ಮುಂಜಾಗ್ರತಾ ದೃಷ್ಟಿಯಿಂದ ಡಿಸಿಬಿ ಶಾಖೆಯನ್ನು ಬೇರೆ ಕೊಠಡಿಗೆ ವರ್ಗಾಯಿಲಾಗಿದೆ ಎಂದು ಪೌರಾಯುಕ್ತ ರುದ್ರಮುನಿ ತಿಳಿಸಿದ್ದಾರೆ.
ನಿರ್ಲಕ್ಷ್ಯಕ್ಕೆ ಆಕ್ರೋಶ: ಕರ ವಸೂಲಿ, ಖಾತೆಗಳ ನಿರ್ವಹಣೆ, ಅನುದಾನ ಬಿಡುಗಡೆ ಮತ್ತು ಖರ್ಚು ಸೇರಿದಂತೆ ನಾನಾ ರೀತಿ ಕಡತಗಳನ್ನು ನಗರಸಭೆಯಲ್ಲಿಡಲಾಗಿರುತ್ತದೆಯಾದರೂ ಅಧಿಕಾರಿಗಳು ಕಡತಗಳನ್ನು ಕಾಪಾಡುವ ವಿಷಯದಲ್ಲಿ ಬನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಕೇಳಿದಾಗ, ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕಡತಗಳನ್ನು ಕೇಳಿದಾಗ ಮಳೆ ಬಂದು ಕಡತಗಳು ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಮಾಹಿತಿ ಲಭ್ಯವಿಲ್ಲ ಎಂಬ ಸಿದ್ಧ ಉತ್ತರವನ್ನು ನೀಡಬಹುದೆಂಬ ಭಾವನೆಯಲ್ಲಿ ಕಡತಗಳ ನಿರ್ವಹಣೆಯಲ್ಲಿ ಹೀಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.