ಮಳೆಯಲ್ಲೇ ನಡೆದ ಪೈಕಾ ದಸರಾ ಕ್ರೀಡಾಕೂಟ
ಚಿಕ್ಕಬಳ್ಳಾಪುರ: ಸುರಿಯುತ್ತಿರುವ ಜಡಿ ಮಳೆಯ ನಡುವೆಯೂ ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪೈಕಾ ದಸರಾ ಕ್ರೀಡಾಕೂಟ ನಡೆಯಿತು.
ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಗುರುವಾರ ಸಹ ಜಡಿ ಮಳೆ ಕ್ರೀಡಾಕೂಟಕ್ಕೆ ತೊಂದರೆಯನ್ನುಂಟು ಮಾಡಿತು. ಮಳೆಯಿಂದ ಮೈದಾನದಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ಕ್ರೀಡಾಪಟು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಲು, ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟವನ್ನು ನಡೆಸಲು ಪರದಾಡಿದರು.
100 ಮೀ, 1500 ಮೀ ಓಟದ ಸ್ಪರ್ಧೆಯ ಸಂದರ್ಭದಲ್ಲಿ ಮೈದಾನದಲ್ಲಿ ನಿರ್ಮಿಸಲಾಗಿದ್ದ ರನ್ನಿಂಗ್ ರೇಸ್ ಟ್ರ್ಯಾಕ್ನಲ್ಲಿ ನೀರು ತುಂಬಿಕೊಂಡು ಮೈದಾನ ತೇವಗೊಂಡಿತ್ತು.
ಇದರಿಂದ ಓಡಲು ವಿದ್ಯಾರ್ಥಿಗಳು ಸಮರ್ಪಕವಾಗಿ ಸಾಧ್ಯವಾಗದೆ ನಿರುತ್ಸಾಹ ಪ್ರದರ್ಶಿಸಿದರು. ಅಲ್ಲದೆ, ಮಳೆ ಜೋರಾಗಿ ಬೀಳುವ ಮುನ್ಸೂಚನೆಯಿಂದ ಸ್ಪರ್ಧೆಗಳನ್ನು ತ್ವರಿತವಾಗಿ ಮುಗಿಸಬೇಕಾಯಿತು.
ಸೆ.16, 17 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ, ಆ ನಂತರ ವಿಭಾಗೀಯ ಕ್ರೀಡಾಕೂಟ ನಡೆಯಲಿದ್ದು, ಕ್ರೀಡಾಕೂಟ ಮುಂದೂಡಿದರೆ, ಮುಂದಿನ ಕ್ರೀಡಾಕೂಟಗಳ ವೇಳಾಪಟ್ಟಿ ಬದಲಾಯಿಸಬೇಕಾಗುತ್ತದೆ. ಇದರಿಂದ ಅನಿವಾರ್ಯವಾಗಿ ಕ್ರೀಡಾಕೂಟಗಳನ್ನು ಮಳೆಯಲ್ಲಿಯೇ ನಡೆಸುತ್ತಿದ್ದೇವೆ ಎಂದು ತೀರ್ಪುಗಾರರಾಗಿದ್ದ ದೈಹಿಕ ಶಿಕ್ಷಣ ಶಿಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಕ್ರೀಡಾ ಪ್ರಾಧಿಕಾರ, ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ (ಪೈಕಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ತಾಲೂಕು ಮಟ್ಟದ ಪೈಕಾ ದಸರಾ ಕ್ರೀಡಾಕೂಟವನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪಿ. ಮುನಿಸ್ವಾಮಿ ಉದ್ಘಾಟಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಮುಂತಾದವರು ಪಾಲ್ಗೊಂಡಿದ್ದರು.