ವಿದ್ಯೆಯಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ'
ಚಿಕ್ಕಬಳ್ಳಾಪುರ: ಸಾಕ್ಷರತೆ ಪ್ರಮಾಣದ ಹೆಚ್ಚಳ ದೇಶದ ಸರ್ವಾಂಗೀಣ ಪ್ರಗತಿಯ ಪ್ರತೀಕ. ಈ ಹಿನ್ನೆಲೆಯಲ್ಲಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಪ್ರತಿಯೊಬ್ಬರು ಶ್ರಮಿಬೇಕೆಂದು ಜಿ.ಪಂ. ಅಧ್ಯಕ್ಷ ಚಿನ್ನಪ್ಪ ತಿಳಿಸಿದರು. ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಆವರಣದಲ್ಲಿರುವ ಡಾ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಕ್ಷರ ನಂದಿ ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಲ್ಲಾ ಶಾಲೆಗಳೂ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಬೇಕು. ವಿದ್ಯೆಯಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎಂದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬ ನಾಗರೀಕನಿಗೂ ಶಿಕ್ಷಣ ಅಗತ್ಯವಾಗಿ ಬೇಕೇ ಬೇಕು. ಮನುಷ್ಯ ಪ್ರಕೃತಿ ಮೇಲೆ ಜಯ ಸಾಧಿಸಿದ್ದಾನೆ. ನೀರು, ಗಾಳಿ, ಇಂಧನದ ಸದುಪಯೋಗವನ್ನು ಕಂಡುಕೊಂಡಿದ್ದಾನೆ. ಇದೆಲ್ಲಾ ಶಿಕ್ಷಣದಿಂದ ಆಗಿದೆ. ಶಿಕ್ಷಣದಿಂದ ಮನುಷ್ಯನ ಏಳ್ಗೆ ಸಾಧ್ಯವೆಂದು ಅವರು ತಿಳಿಸಿದರು. ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಮಾತನಾಡಿ, ವಿದ್ಯೆಯಿಲ್ಲದವರು ಯಾವ ಸಮರ್ಪಕವಾಗಿ ಸಾಧನೆಯನ್ನೂ ಮಾಡಲು ಸಾಧ್ಯವಿಲ್ಲ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಓದು, ಬರಹಗಳನ್ನು ನಾವು ಮೈಗೂಡಿಸಿಕೊಂಡಿರುತ್ತೇವೆ. ವಿದ್ಯೆ ಕದಿಯಲಾರದ ಸಂಪತ್ತು ಎಂದವರು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದಶಕ ಅಜಿತ್ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಸುರೇಖಾ ವಿಜಯಪ್ರಕಾಶ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ, ಪ್ರಭಾರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ದಸ್ತಗಿರಿ ಸಾಬ್ ಉಪಸ್ಥಿತರಿದ್ದರು.
ಮಧ್ಯಪ್ರವೇಶಕ್ಕೆ ರೈತ ಸಂಘ ಆಗ್ರಹ
ಚಿಕ್ಕಬಳ್ಳಾಪುರ: ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ದೇಶದ ಅಲ್ಪಾವಧಿ ಸಹಕಾರಿ ಸಾಲ ರಚನೆ ಕುರಿತ ಪ್ರಕಾಶ ಬಕ್ಷಿ ವರದಿಯ ಶಿಫಾರಸ್ಸುಗಳನ್ನು ಮನಬಂದಂತೆ ಹೇರುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಮತ್ತು ಹಣಕಾಸು ಇಲಾಖೆ ಮಧ್ಯೆ ಪ್ರವೇಶಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ಧಗಂಗಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಸರ್ವ್ ಬ್ಯಾಂಕ್ ನೇಮಿಸಿದ ಪ್ರಕಾಶ ಬಕ್ಷಿ ಸಮಿತಿ ಸಹಕಾರಿ ಪತ್ತಿನ ಸೊಸೈಟಿಗಳ ಬುನಾದಿಗೆ ಏಟು ಕೊಡುವ ವರದಿ ಮುಂದಿಟ್ಟಿದೆ. ಪ್ರಾಥಮಿಕ ಕೃಷಿ ಸಹಕಾರಿ ಸೊಸೈಟಿಗಳನ್ನು ಕೇವಲ ಪತ್ರ ವ್ಯವಹಾರದ ಸಂಸ್ಥೆಗಳಾಗಿ ಪರಿವರ್ತಿಸಿ ಅವುಗಳ ಆಸ್ತಿಗಳು ಮತ್ತು ಸದಸ್ಯರನ್ನು ಕೇಂದ್ರೀಯ ಸಹಕಾರಿ ಬ್ಯಾಂಕುಗಳಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಾಥಮಿಕ ಸೊಸೈಟಿಗಳು ಇನ್ನೂ ಮುಂದೆ ಕೇಂದ್ರೀಯ ಸಹಕಾರಿ ಬ್ಯಾಂಕುಗಳ ಸಾಲ ಪಡೆಯುವ ಸಂಸ್ಥೆಗಳಾಗಿ ಉಳಿಯುವುದಿಲ್ಲವಾದ್ದರಿಂದ ಅವು ಕೇಂದ್ರೀಯ ಸಹಕಾರಿ ಬ್ಯಾಂಕುಗಳ ನಿರ್ದೇಶಕ ಮಂಡಳಿಯ ಚುನಾವಣೆಗಳಲ್ಲಿ ಮತದಾನದ ಹಕ್ಕುಗಳನ್ನು ಪಡೆದಿರುವುದಿಲ್ಲ. ರಿಸರ್ವ್ ಬ್ಯಾಂಕ್ ನಿರ್ದೇಶನಗಳನ್ನು ಹೊರಡಿಸಬಹುದು. ಅದು ಸಹಕಾರಿ ಸೊಸೈಟಿಗಳ ಚುನಾಯಿತ ಮಂಡಳಿಗಳ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳನ್ನು ಮೀರಿ ಹೋಗುವ ಅಧಿಕಾರವನ್ನು ಪಡೆಯುತ್ತದೆ ಎಂದು ಆರೋಪಿಸಿದರು. ಈಗಾಗಲೇ ಎಐಕೆಎಸ್ ಅಲ್ಪಾವಧಿ ಸಹಕಾರಿ ಸಾಲ ರಚನೆಯ ಮೂಲ ತಳಪಾಯವನ್ನು ಪುಡಿಗಟ್ಟುವ ಉದ್ದೇಶವುಳ್ಳ ಈ ರೈತ ವಿರೋಧಿ ನೀತಿ ನಿಲ್ಲಿಸುವಂತೆ ಪ್ರಧಾನಿ ಮತ್ತು ಹಣಕಾಸು ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಅಲ್ಲದೇ ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ಉಂಟಾಗಿರುವ ಸಮಸ್ಯೆ ಬಗೆಹರಿಸದಿದ್ದಲ್ಲಿ ರಾಜ್ಯದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಆರ್ಎಸ್ನ ಪ್ರಧಾನ ಕಾರ್ಯದರ್ಶಿ ಚನ್ನರಾಯಪ್ಪ, ಸಬಿ.ಎನ್. ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.