ಸಚಿವರ ವಿರುದ್ಧ ಪ್ರತಿಭಟನಾಕಾರರ ಗುಡುಗು
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ಜನಪ್ರತಿನಿಧಿಗಳು ಕಳೆದ ಎರಡು ತಿಂಗಳ ಹಿಂದೆ ಮಗಳು ಮತ್ತು ಮೊಮ್ಮಗಳ ಸಾವಿನಿಂದ ನೊಂದಿರುವ ಬೀರಪ್ಪ ಮತ್ತವರ ಮನೆಯವರಿಗೆ ಸಾಂತ್ವನ ಹೇಳುವುದಕ್ಕೆ ಕನಿಷ್ಠ ಸೌಜನ್ಯ ತೋರಿಲ್ಲವೆಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಗತಿಪರ ಸಂಘಟನೆಗಳಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಕೆಲವು ದಿನಗಳ ಹಿಂದೆ ತಮ್ಮೊಡನೆ ಮಾತನಾಡಿ ಬಳ್ಳಾರಿ ಪ್ರವಾಸ ಇರುವುದರಿಂದ ಕೋಲಾರಕ್ಕೆ ಭೇಟಿ ನೀಡಲು ಆಗಲಿಲ್ಲ, ಅಲ್ಲಿಂದ ಬಂದ ಮೇಲೆ ಪ್ರತಿಭಟನಾಕಾರರ ಜೊತೆ ಮಾತನಾಡುವೆ ಎಂದು ಹೇಳಿ ಮಾತು ತಪ್ಪಿದ್ದಾರೆಂದು ದೂರಿದರು. ಜಿಲ್ಲೆಯವರೇ ಆದ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರು ಸಹ ವೀಣಾ ಮತ್ತು ಪುಟ್ಟ ಮಗು ದೀಪ್ತಿಯ ಕೊಲೆ ವಿಚಾರದಲ್ಲಿ ಉದಾಸೀನ ತೋರಿದ್ದಾರೆ, ಜಿಲ್ಲೆಯಲ್ಲಿದ್ದಾಗಲೂ ಅವರು ನೊಂದವರ ಜೊತೆ ಮಾತನಾಡಿ ಸಾಂತ್ವನ ಹೇಳಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೇಂದ್ರ ಸಚಿವರ ನಡವಳಿಕೆ ಕಾಂಗ್ರೆಸ್ ಸಂಸ್ಕೃತಿಯ ಧ್ಯೋತಕವಾಗಿ ಎಂದು ಛೇಡಿಸಿದರು. ಸಚಿವರುಗಳ ಅಥವಾ ಜಿಲ್ಲೆಯ ಶಾಸಕರ ಮನೆಯಲ್ಲಿ ಈ ರೀತಿಯ ದುರಂತ ನಡೆದಿದ್ದರೆ ಸುಮ್ಮನೆ ಇರುತ್ತಿದ್ದರೇ ಎಂದು ಪ್ರಶ್ನಿಸಿದ ಬಯ್ಯಾರೆಡ್ಡಿ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಲು ಇನ್ನಷ್ಟು ವಿಳಂಬ ಮಾಡುವುದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಎಚ್ಚರಿಸಿದರು.