15 ರಂದು ಜಾನಪದ ಗೀತೆ, ಹಾಸ್ಯ ಕಾರ್ಯಕ್ರಮ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 12
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಪಯುಕ್ತ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸೇನೆ ಮತ್ತಿತರ ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಜನತೆಗೆ ಸಾಹಿತ್ಯ ಹಾಗೂ ಸಂಗೀತದ ರಸದೌತಣವನ್ನು ನೀಡಲು ಸೆ.15 ರಂದು ಜಾನಪದ ಗೀತೆ ಮತ್ತು ಹಾಸ್ಯ ಕಾರ್ಯಕ್ರಮವನ್ನು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್ ಈ ವಿಷಯ ತಿಳಿಸಿದರು.
ಸಂಜೆ 5-30 ಕ್ಕೆ ನಗರದ ಪ್ರೇಕ್ಷಕರಿಗಾಗಿ ಮಧುರ ಮಧುರವೀ ಮಂಜುಳ ಗಾನ ಕಾರ್ಯಕ್ರಮದ ನಿರೂಪಕರಾದ ಸಾರ್ಥವಳ್ಳಿ ನಾರಾಯಣಸ್ವಾಮಿಯವರ ಸಾರಥ್ಯದಲ್ಲಿ ಇದೇ ಪ್ರಥಮ ಬಾರಿಗೆ ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು ಹಳೆಯ ಚಲನ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಜಾನಪದ ಕಲಾರತ್ನ ಅಲೂರು ನಾಗಪ್ಪನವರಿಂದ ಜಾನಪದ ಗೀತೆ ಮತ್ತು ಹಾಸ್ಯ ಕಾರ್ಯಕ್ರಮವನ್ನು ರಸವತ್ತಾಗಿ ಜನತೆಗೆ ನೀಡ ಬಯಸಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಎಸ್.ಎನ್. ಅಮೃತಕುಮಾರ್, ತಾಲೂಕು ಗೌರವ ಕಾರ್ಯದರ್ಶಿ ಎಂ. ಕೃಷ್ಣಪ್ಪ, ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಹನುಮಂತರಾಯಪ್ಪ, ಕನ್ನಡ ಸೇನೆಯ ಕೆ.ಪಿ.ನವಮೋಹನ್ ಇದ್ದರು.