ಗಣೇಶ ವಿಸರ್ಜನೆಗೆ ಗುಂಪುಗಳ ಮೇಲಾಟ, ಹೊಯ್ಕೈ
ಕ.ಪ್ರ.ವಾರ್ತೆ ಚಿಂತಾಮಣಿ ಸೆ. 12
ಪಣಚೌಡನಹಳ್ಳಿ ಗ್ರಾಮದಲ್ಲಿ 2 ಕಡೆಯ ಪರ-ವಿರೋಧ ಗುಂಪುಗಳು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ತಾ ಮುಂದು ನಾ ಮುಂದು ಎಂದು ರಾಜಕೀಯ ಸ್ವಪ್ರತಿಷ್ಠೆಯಿಂದ ಮಾತಿನ ಚಕಮಕಿನಡೆದು ಕೈ ಕೈ ಮಿಲಾಯಿಸಲು ಯತ್ನಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ತಾಲೂಕಿನ ಪಣಚೌಡನಹಳ್ಳಿ ಗ್ರಾಮದಲ್ಲಿ ಮೇಲ್ವರ್ಗದ ಸಮುದಾಯದ ಪರ ಒಂದು ಗುಂಪು ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಮುಂದಾದಾಗ ಅದೇ ಗ್ರಾಮದಲ್ಲಿ ದಲಿತ ಕೇರಿಯಲ್ಲಿ ಇಟ್ಟಿದ್ದ ಗಣೇಶ ಮೂರ್ತಿ ಮತ್ತೊಂದು ಗುಂಪು ವಿಸರ್ಜನೆ ಮಾಡಲು ನಾವು ಮೊದಲು ಮೆರವಣಿಗೆಯಲ್ಲಿ ಹೋಗಬೇಕೆಂದು ತೀರ್ಮಾನಿಸಿದ ಪರಿಣಾಮ 2 ಗುಂಪುಗಳಲ್ಲಿ ಭಿನ್ನಾಭಿಪ್ರಾಯದಿಂದ ಗ್ರಾಮದಲ್ಲಿ ರಾಜಕೀಯ ಸ್ವಪ್ರತಿಷ್ಠೆಯಿಂದ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಲು ಯತ್ನಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತರಲು ಮುಂದಾದರು.
ಗ್ರಾಮದಲ್ಲಿ ಒಂದೇ ಗಣೇಶನ ಮೂರ್ತಿ ಇಡುತ್ತಿದ್ದು, ಗ್ರಾಮದ ಎಲ್ಲಾ ಜನರು ಒಂದು ಕಡೆ ಸೇರಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಅತಿ ವಿಜೃಂಭಣೆಯಿಂದ ಗಣೇಶನ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿತ್ತು ಎಂದು ಗ್ರಾಮದ ಹಿರಿಯರೊಬ್ಬರ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಕಳೆದ ಎರಡು ಅಥವಾ ಮೂರು ವರ್ಷಗಳಿಂದ ಸಮಾಜ ಸೇವಕರೊಬ್ಬರು ನೀಡುತ್ತಿದ್ದ ಗಣೇಶನ ಮೂರ್ತಿ ಗ್ರಾಮದಲ್ಲಿ 2 ಗುಂಪುಗಳಾಗಲು ಸಾಧ್ಯವಾಯಿತೆಂದು ಮತ್ತು ಗ್ರಾಮದಲ್ಲಿಯೂ ಸಹ ಗುಂಪು-ಗುಂಪುಗಾಳಗಿ ವಿಂಗಡಣೆಯಾಗಲು ಪ್ರೇರೇಪಣೆ ಆಯಿತೆಂದು ಗ್ರಾಮದಲ್ಲಿ ಜನರು ಅಲ್ಲಲ್ಲಿ ಹೇಳುತ್ತಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ದಕ್ಕೆ ಆಗದಂತೆ ಗ್ರಾಮದಲ್ಲಿ ಎಲ್ಲಾ ಗ್ರಾಮಸ್ಥರು ಒಮ್ಮತದಿಂದ ಗಣೇಶನ ಮೂರ್ತಿ ವಿಸರ್ಜನೆ ಮಾಡಲು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಒಗ್ಗಟ್ಟಿನಿಂದ ಕಾರ್ಯಕ್ರಮ ನಡೆಯಲು ಹಿರಿಯರು ಪಂಚಾಯ್ತಿ ಮುಖಾಂತರ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಗ್ರಾಮದ ಜನರು ಮಾತನಾಡುಕೊಳ್ಳುತ್ತಿದ್ದಾರೆ.
ವಿನಾಯಕ ಮಹಾಸಭಾದಿಂದ ಇಂದು ಗಣೇಶ ವಿಸರ್ಜನೆ
ಕೋಲಾರ: ಅಖಂಡ ಭಾರತ ವಿನಾಯಕ ಮಹಾಸಭಾದ ವತಿಯಿಂದ ನಗರದ ಎಸ್.ಎನ್.ಆರ್. ವೃತ್ತದ ಪ್ರವಾಸಿ ಮಂದಿರದ ಮುಂಭಾಗ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಸೆ.13ರ ಶುಕ್ರವಾರ ಬೆಳಗ್ಗೆ 10.30 ಅದ್ಧೂರಿ ಮೆರವಣಿಗೆಯೊಂದಿಗೆ ಕೋಲಾರಮ್ಮ ಕೆರೆಯ ಅಂಗಳದ ತಾತ್ಕಾಲಿಕ ಹೊಂಡದಲ್ಲಿ ವಿಸರ್ಜನೆ ಮಾಡಲಾಗುವುದು.