ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಡಿತರದಾರರಿಗೆ ದರ, ಅಳತೆಯಲ್ಲಿ ಮೋಸ: ಆರೋಪ

Mainashree
Updated On : 13 Sept 2013, 12:03 pm

ಬಾಗೇಪಲ್ಲಿ: ಸರ್ಕಾರ ನಿಗದಿಪಡಿರುವ ದರ ಮತ್ತು ಅಳತೆ ಪ್ರಮಾಣದಲ್ಲಿ ಸೀಮೆಣ್ಣೆಯನ್ನು ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ವಿತರಣೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ಮಿಟ್ಟೇಮರಿ ಹೋಬಳಿ ದುಗ್ಗಿನಾಯ್ಕನಹಳ್ಳಿ ಗ್ರಾಮಸ್ಥರು ಎಗವ ಮಾರಪ್ಪಗಾರಹಳ್ಳಿ ನ್ಯಾಯ ಬೆಲೆ ಅಂಗಡಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ  ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕ ಎಂ.ವಿ. ಲಕ್ಷ್ಮೀನರಸಿಂಹಪ್ಪ ಗ್ರಾಮದ ಪಡಿತರ ಚೀಟಿದಾರರಿಗೆ  ಸರ್ಕಾರ ನಿಗದಿಪಡಿಸಿರುವ ದರ ಮತ್ತು ಅಳತೆಯಲ್ಲಿ ಸೀಮೆಎಣ್ಣೆಯನ್ನು ವಿತರಣೆ ಮಾಡಬೇಕಾಗಿದ್ದ ಎಗವ ಮಾರಪ್ಪಗಾರಪಲ್ಲಿಯ ನ್ಯಾಯಬೆಲೆ ಅಂಗಡಿ ಮಾಲೀಕರಾದ ಮುತ್ತಿರೆಡ್ಡಿ ಸೀಮೆಎಣ್ಣೆ ಅಳತೆಯಲ್ಲಿ ಕಡಿಮೆಗೊಳಿಸಿ ಹೆಚ್ಚಿನ ಬೆಲೆಯನ್ನು ಪಡೆಯುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದಾರೆಂದು ಆರೋಪಿಸಿದರು.
ಸರ್ಕಾರ ನಿಗದಿಪಡಿಸಿರುವ 1ಲೀಟರ್ ಸೀಮೆಎಣ್ಣೆಗೆ 16.20 ರು. ನಂತೆ ಪ್ರತಿ ಕಾರ್ಡಿಗೂ 5 ಲೀಟರ್ಗೆ ನ್ಯಾ   ಯಬೆಲೆ ಅಂಗಡಿಯ ಪರವಾನಿಗೆದಾರರು ಪ್ರತಿ ಪಡಿತರ ಚೀಟಿದಾರರಿಗೂ ನೀಡಬೇಕು ಆದರೆ ಅವರು ಪ್ರತಿ ಲೀಟರ್ ಸೀಮೆ ಎಣ್ಣೆಗೆ 18 ರು.ಗಳನ್ನು ವಸೂಲಿ ಮಾಡುತ್ತಿದ್ದಾರೆ ಹಾಗೂ 5 ಲೀಟರ್ ಸೀಮೆಎಣ್ಣೆಯ ಬದಲಿಗೆ ಕೇವಲ 2 ಲೀಟರ್ ಸೀಮೆ ಎಣ್ಣೆಯನ್ನು ಮಾತ್ರ ವಿತರಣೆ ಮಾಡುತ್ತಿದ್ದಾರೆ.ಇದನ್ನು ಪ್ರಶ್ನಿಸಿದ  ಗ್ರಾಮಸ್ಥರಿಗೆ  ಅವಾಚ್ಯ ಶಬ್ಧಗಳಿಂದ ನಿಂಧಿಸಿ, ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ನಾನು ಹೇಳಿದ ಹಾಗೇ ಕೇಳುತ್ತಾರೆ ಅದರಿಂದ ನಾನು ಪ್ರತಿ ಕಾರ್ಡಿಗೆ ಕೊಡುವುದೇ 2 ಲೀಟರ್, ನೀವು ನಿಮ್ಮ ಕೈಲಾಗಿದ್ದು ಮಾಡಿಕೊಳ್ಳಿ ಎಂದು ಬೆದರಿಕೆ ಹಾಕುತ್ತಾರೆಎಂದು ದೂರಿದ ಅವರು, ಸೀಮೆಎಣ್ಣೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಗಳಿಗೆ ಮಾರಾಟ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಡವರ ಬಾಯಿಗೆ ಮಣ್ಣು ಹಾಕುವಂತಹ ಕೆಲಸದಲ್ಲಿ ನಿರತರಾಗಿದ್ದಾರೆಂದು ಆರೋಪಿಸಿದರು.
ಪಡಿತರ ಚೀಟಿದಾರರಿಗೆ ಸರ್ಕಾರ ನಿಗಧಿಪಡಿಸಿರುವ ದರ ಮತ್ತು ಅಳತೆಯಲ್ಲಿ ವ್ಯತ್ಯಾಸ ಮಾಡಿ ಬಡ ಗ್ರಾಹಕರನ್ನು ವಂಚನೆ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ನ್ಯಾಯ ಬೆಲೆ ಅಂಗಡಿಗಳ ಪರವಾನಿಗೆದಾರರ ಪರವಾನಗಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸುವುದಾಗಿ ನ್ಯಾಯ ಬೆಲೆ ಅಂಗಡಿಗಳ ಪರವಾನಿಗೆದಾರರಿಗೆ ಎಚ್ಚರಿಕೆ ನೀಡಿದರು.
ನ್ಯಾಯಬೆಲೆ ಅಂಗಡಿಯ ಮುಂದೆ ಸುಮಾರು 6 ಗಂಟೆಗಳ ಕಾಲ ನಿರಂತರ ಧರಣಿ ನಡೆಸಿ ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಘೋಷಣೆ ಕೂಗಿದರು. ಈ ಸಂಬಂಧ ಆಹಾರ ಇಲಾಖೆಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ವಿ. ಗಂಗುಲಪ್ಪ, ಕೆ.ಸಿ. ರಮಣಪ್ಪ, ಜಯಂತ್, ಎಲ್.ಎನ್. ನರಸಿಂಹಪ್ಪ, ಕೆ.ವಿ. ರಮೇಶ್, ನಾಗೇಶ್, ನಾಗರಾಜ್, ಅಂಜಿನಪ್ಪ,,  ವಿ.ಎನ್. ನರಸಿಂಹಪ್ಪ, ಗಂಗಯ್ಯ, ವೆಂಕಟಮ್ಮ, ಚಿಕ್ಕಕದಿರಪ್ಪ, ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement