ವರುಣನ ಸಿಂಚನ; ಅನ್ನದಾತರಲ್ಲಿ ಆನಂದ
ಕ.ಪ್ರ.ವಾರ್ತೆ ಬಂಗಾರಪೇಟೆ ಸೆ. 12
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಸುರಿದ ಮಳೆಗೆ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗದಿದ್ದರೂ ಇಳೆ ತಂಪಾಗಿದ್ದು ಎಲ್ಲಿ ನೋಡಿದರೂ ಹಚ್ಚ ಹಸಿರು ಕಣ್ಣಿಗೆ ತಂಪು ನೀಡಿ ಜಾನುವಾರುಗಳಿಗೆ ಮೇವು ಲಭಿಸುವಂತಾಗಿದೆ ಮತ್ತೊಂದೆಡೆ ಮಳೆಯಾಶ್ರಿತ ಬೆಳೆಗಳಿಗೆ ಹೋದ ಜೀವ ಮತ್ತೆ ಬಂದಂತಾಗಿದೆ.
ಕ್ಷೇತ್ರವನ್ನು ಸತತವಾಗಿ ಎಂಟು ವರ್ಷಗಳಿಂದ ಮಳೆರಾಯ ಮುನಿಸಿಕೊಂಡಿದ್ದರಿಂದ ಬರ ಎಲ್ಲಾ ವರ್ಗದವರನ್ನು ತೀವ್ರವಾಗಿ ಭಾದಿಸುತ್ತಿತ್ತು. ಮಳೆಯಾಶ್ರಿತ ಬೆಳೆಗಳಿಗೆ ನೀರಿಲ್ಲದೆ ಬೆಳೆಗಳು ಒಣಗಲಾರಂಭಿಸಿತು. ಮಳೆ ಕುಂಠಿತದಿಂದಾಗಿ ಬಿತ್ತನೆ ಕಾರ್ಯ ಸಹ ಕ್ಷೇತ್ರದಲ್ಲಿ ಅಷ್ಟಕ್ಕಷ್ಟೆಯಾಗಿತ್ತು. ಇನ್ನೇನು ರೈತರ ಬದುಕು ಮುಗಿದೇ ಹೋಯಿತು ಎಂದು ಭಾವಿಸಲಾಗಿತ್ತು. ಮೇ, ಜೂನ್, ಜುಲೈ, ಆಗಸ್ಟ್ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಸರ್ಕಾರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಭಗೀರಥ ಪ್ರಯತ್ನ ಮಾಡಿದರೂ ಎಳ್ಳಷ್ಟು ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಈ ಮಧ್ಯೆ ಸರ್ಕಾರ ಸಹ ಕ್ಷೇತ್ರವನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.ಕಳೆದ ವಾರ ಸುರಿದ ಮಳೆಗೆ ಇಳೆ ತಂಪಾಗಿದ್ದು ಸಣ್ಣಪುಟ್ಟ ಕುಂಟೆಗಳಲ್ಲಿ ನೀರು ತುಂಬಿದೆ. ಶೇಂಗಾ,ರಾಗಿ ಮಿಶ್ರಿತ ಬೆಳೆಗಳಿಗೆ ಹೋದ ಜೀವ ಮತ್ತೆ ಬಂದಂತಾಗಿದೆ.
ಗೊಬ್ಬರ ದುಬಾರಿ: ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ ಕೈಕೊಟ್ಚಿದ್ದರಿಂದಾಗಿ ಬಿತ್ತನೆ ಕಾರ್ಯ ಸಹ ಕ್ಷೇತ್ರದಲ್ಲಿ ಕುಂಠಿತವಾಗಿದ್ದು, ವಾರದ ಹಿಂದೆ ಬಿದ್ದ ಮಳೆಗೆ ರೈತರಲ್ಲಿ ಮತ್ತೆ ಕೃಷಿ ಚಟುವಟಿಕೆಗಳನ್ನು ನೆನೆಪಿಸುವಂತೆ ಮಾಡಿದೆ. ಈಗ ಮತ್ತೆ ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ. ಆದರೆ ರಸಗೊಬ್ಬರದ ಅಂಡಿಗಳಲ್ಲಿ ಗೊಬ್ಬರ ದರವನ್ನು ಏಕಾಏಕಿ ತಮಗೆ ಇಷ್ಟ ಬಂದಂತೆ ಏರಿಕೆ ಮಾಡಿಕೊಂಡು ರೈತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಕೃಷಿ ಅಧಿಕಾರಿಗಳು ಖಾಸಗಿ ಗೊಬ್ಬರ ಅಂಗಡಿಗಳ ಮಾಲಿಕರನ್ನು ಪ್ರಶ್ನಿಸುವ ಗೋಜಿ ಹೋಗುತ್ತಿಲ್ಲ, ಕೃಷಿ ಅಧಿಕಾರಿಗಳು ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಸರ್ಕಾರ ಕ್ಷೇತ್ರವನ್ನು ಬರಪೀಡಿತವೆಂದು ಅಧಿಕೃತವಾಗಿ ನಾಲ್ಕು ಬಾರಿ ಘೋಷಣೆ ಮಾಡಿದರೂ ಬರಪೀಡಿತ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಮಾತ್ರ ಕೈಗೊಳ್ಳದೆ ಬರೀ ಹೆಸರಿಗೆ ಬರಪೀಡಿತ ಎಂದು ಪ್ರಕಟಿಸಿದೆ,ಬರ ಕಾಮಗಾರಿಗಳನ್ನು ಮಾಡಿಲ್ಲ, ಕೃಷಿ ಮತ್ತು ಕೂಲಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವಂತ ಕೆಲಸವನ್ನು ಮಾಡಿಲ್ಲ, ಮೇವು ಬ್ಯಾಂಕ್ ತೆರೆದಿಲ್ಲ. ಖಾತರಿ ಯೋಜನೆ ಇದೆ ಆದರೆ ಕೂಲಿ ಬೇಕೆಂದು ಹೋದವರಿಗೆ ಕೂಲಿ ಕೊಡುತ್ತಿಲ್ಲ ಕೊಟ್ಟರೂ ಸಮಯಕ್ಕೆ ಕೂಲಿ ಹಣ ನೀಡದ ಕಾರಣ ಖಾತರಿ ಯೋಜನೆ ಎಂದರೆ ಕೂಲಿ ಕಾರ್ಮಿಕರು ಮಾರುದ್ದ ದೂರವೇ ಉಳಿಯುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನಗೆ ಇನ್ನಿಲ್ಲದಷ್ಟು ಸಮಸ್ಯೆ ಇದೆ ಆದರೆ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಕೇಳಿದರೆ ಆಕಾಶವನ್ನು ತೋರಿಸುವರು ಮಳೆ ಬಾರದೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂಬ ಸಿದ್ಧ ಉತ್ತರ ಕೊಡುವರು. ಇದಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕ್ಷೇತ್ರದಲ್ಲಿ 5 ತಿಂಗಳಲ್ಲಿ ಎಲ್ಲಿಯೂ ನೀರಿನ ಅಭಾವ ಬಾರದಂತೆ ನೋಡಿಕೊಳ್ಳುವುದಾಗಿ ಹೇಳಿ 5ತಿಂಗಳಾದರೂ ಸಮಸ್ಯೆ ಮಾತ್ರ ನಿಂತಿಲ್ಲ ಮತ್ತು ಶಾಶ್ವತ ನೀರಾವರಿ ಅನುಷ್ಠಾನಕ್ಕೆ ಮೊದಲ ಆಧ್ಯತೆ ನೀಡುವುದಾಗಿ ಹೇಳಿ ಬಹುನಿರೀಕ್ಷಿತ ನಾಲ್ಕು ತಾಲೂಕುಗಳ ಜನರ ಬಾಯಾರಿಸುವ ಯರಗೋಳ್ ಯೋಜನೆಯ ಅಣೆಕಟ್ಟು ನಿರ್ಮಾಣಕ್ಕೆ ಒಮ್ಮೆ ದಿನಾಂಕ ನಿಗದಿಪಡಿಸಿದ್ದರು ನಂತರ ಅದೂ ಮುಂದೂಡಲಾಯಿತು ಈಗ ಅದರ ಬಗ್ಗೆ ಪ್ರಸ್ತಾವನೇ ಇಲ್ಲದಂತಾಗಿದೆ. ಶಾಸಕರು ಪ್ರಾರಂಭದಲ್ಲಿ ತೋರಿದ ಆಸಕ್ತಿ ದಿನ ಕಳೆದಂತೆ ಕ್ಷೀಣಿಸುತ್ತಿರುವಂತೆ ಕಾಣುತ್ತಿದೆ.