ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು; ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಹಿಡಿಶಾಪ
ಚಿಂತಾಮಣಿ: ಕೆಂಪು ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ಕೈವಾರ ಗ್ರಾಮಾಂತರ ಪ್ರದೇಶದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದರೂ, ಸ್ಪಂದಿಸದೆ ಇರುವ ಬಗ್ಗೆ ಆರೋಪಿಸಿ ರಸ್ತೆ ತಡೆ ಮಾಡಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.
ಈ ಬಗ್ಗೆ ಸಾರಿಗೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ ನಡೆಸಲು ಪೊಲೀಸರಿಗೆ ಇಂದು ದೂರು ನೀಡಿದ್ದಾರೆ. ತಾಲೂಕಿನ ಕೈವಾರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ನೂರಾರು ವಿದ್ಯಾರ್ಥಿಗಳು ಚಿಂತಾಮಣಿ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗಿ ಬರಲು ಸರ್ಕಾರದ ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದೆ ಇರುವ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯಾಗಿದೆಯೆಂದು ಆರೋಪಿಸಿದ್ದಾರೆ.
ದೂರು ನೀಡಿ ತಿಂಗಳು ಕಳೆಯುತ್ತಿದ್ದರೂ ಅಧಿಕಾರಿಗಳು ವಿದ್ಯಾರ್ಥಿಗಳ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಇದರ ಪರಿಣಾಮ ಎಲ್ಲಾ ವಿದ್ಯಾರ್ಥಿಗಳು ಸೇರಿ ಮುಂದಿನ ದಿನ ನಿಗದಿಪಡಿಸಿಕೊಂಡು ಬೆಂಗಳೂರು-ಚಿಂತಾಮಣಿ ಮಾರ್ಗದ ಕೈವಾರ ಕ್ರಾಸ್ ಬಳಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆಂದು ವಿದ್ಯಾರ್ಥಿಗಳಾದ ರಾಜೇಶ್, ಸುಹಾಸ್, ಮಹೇಶ್, ಹರಿರೀಶ್, ಹೇಮಂತ್, ಚಲಪತಿ, ವಿಜಯ್ಕುಮಾರ್, ಸುರೇಶ್ ಮತ್ತಿತರರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.